ಮೋದಿ ಅವ್ರನ್ನ ನೋಡಿ ಸಿದ್ದರಾಮಯ್ಯ ಕಲಿಯಬೇಕು: ಸಿಎಂಗೆ ತಿವಿದ ದೊಡ್ಡಗೌಡರು

2 Min Read

– ನಿತೀಶ್ ಕುಮಾರ್‌ಗೆ ಶಕ್ತಿ ಕೊಟ್ಟಿದ್ದು ಮೋದಿ ಎಂದ ಹೆಚ್‌ಡಿಡಿ

ಬೆಂಗಳೂರು: ಈ ನಾಡು ಕಂಡ ಅತ್ಯಂತ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ನೋಡಿ ಕಲಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Deve Gowda) ಅವರು ತಿವಿದರು.

ಜಾತ್ಯತೀತ ಜನತಾದಳ ಪಕ್ಷ (JDS) ಸ್ಥಾಪಿಸಿ 25 ವರ್ಷ ಪೂರೈಸಿದ ಹಿನ್ನೆಲೆ ಕೆಂಗೇರಿ ಬಳಿಯ ಕೊಮ್ಮಘಟ್ಟದ ಬಳಿ ಹಮ್ಮಿಕೊಂಡಿದ್ದ ʻಜೆಡಿಎಸ್ ಬೆಳ್ಳಿ ಹಬ್ಬʼ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು.

ಮುಸ್ಲಿಂ ಲೀಡರ್ (Muslim Leader) ಗೆಲ್ಲಿಸಲು ದರಿದ್ರ ನಾರಾಯಣ ರ‍್ಯಾಲಿ ಮಾಡಿದೆ. ಆ ರ‍್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದೂ ಕೂಡ ಅವ್ರೇ. ಸಿದ್ದರಾಮಯ್ಯ ಮೋದಿಯನ್ನ ನೋಡಿ ಕಲಿಯಬೇಕು. ನಿತೀಶ್ ಕುಮಾರ್ 20 ವರ್ಷ ಬಿಹಾರ ಸಿಎಂ ಆಗಿದ್ರು, ನಿತೀಶ್‌ಗೆ ಶಕ್ತಿ ಕೊಟ್ಟಿದ್ದು ಮೋದಿ ಎಂದು ಹೊಗಳಿದರು.

ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಸರ್ಕಾರ ತೆಗೆಯುವಂತೆ ಮಾಡಿದ್ರು. ಆಗ ಮೋದಿಯವರು ಜೊತೆಗೆ ಬನ್ನಿ ಅಂತ ಕರೆದ್ರು. ನಾನು ಓಕೆ ಅಂದೆ. ಕಾಂಗ್ರೆಸ್ ಜೊತೆ ಇದ್ದು ಏಟಿನ ಮೇಲೆ ಏಟು ತಿಂದ್ವಿ. ಹಾಗಾಗಿ ಮೋದಿ ಜೊತೆಗೆ ಹೋಗಲು ಕುಮಾರಸ್ವಾಮಿಗೆ ಒಪ್ಪಿಗೆ ಕೊಟ್ಟೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಕುಮಾರಸ್ವಾಮಿಗೆ ಸಹಕಾರ ಕೊಡ್ತಿಲ್ಲ. HMT ಜಾಗದ ವಿಚಾರವಾಗಿ ಕೋರ್ಟ್‌ಗೆ ಹೋಗ್ತಾರೆ. ರಾಷ್ಟ್ರೀಯ ಪಕ್ಷದ ಜೊತೆ ಕೆಲಸ ಮಾಡುವಾಗ ನಮಗೂ ಇತಿಮಿತಿ ಇದೆ. ರಾಜ್ಯದಲ್ಲಿ ಅತ್ಯಂತ ನಾಡುಕಂಡ ಕೆಟ್ಟ ಸರ್ಕಾರ ಇದೆ. 2 ವರ್ಷ ಈ ಸರ್ಕಾರ ಇರಬಹುದು ಎಂದು ಭವಿಷ್ಯ ನುಡಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 2023-24 ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ 33% ಕೊಡೋ ಬಗ್ಗೆ ತಿದ್ದುಪಡಿಯಲ್ಲಿ ತಂದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸ್ ಮಾಡಿಸಿದ್ರು. ಏಪ್ರಿಲ್ 16, 17, 18 ಇದರ ಬಗ್ಗೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗುತ್ತದೆ. ಅಲ್ಲದೇ 545 ಲೋಕಸಭಾ ಸ್ಥಾನ 858 ಕ್ಕೆ ಹೋಗುತ್ತದೆ. ಕರ್ನಾಟಕದ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರುತ್ತದೆ ಎಂದು ಮೋದಿ ಸರ್ಕಾರದ ಸಾಧನೆಗಳನ್ನ ಬಣ್ಣಿಸಿದರು.

ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಇಷ್ಟು ದೊಡ್ಡ ಸಭೆ ನಡೆಯುತ್ತಿದೆ. ನನ್ನ ದೃಷ್ಟಿಯಿಂದ ಇಂತಹ ಸಮಾವೇಶ ಬೆಂಗಳೂರಿನಲ್ಲಿ ಹಿಂದೆ ನಡೆದಿಲ್ಲ. ನಾನು ಬರೋವಾಗ ಇನ್ನು ವಾಹನ ಬರ್ತಾ ಇತ್ತು, 2 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Share This Article