ರಾಹುಲ್‌ ಗಾಂಧಿ ಹೊಗಳಿದ ಪಾಕ್‌ ಮಾಜಿ ಸಚಿವ- ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

By
1 Min Read

ನವದೆಹಲಿ: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸಂಪುಟದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ (Chaudhry Fawad Hussain) ಅವರು ರಾಹುಲ್‌ ಗಾಂಧಿಯನ್ನು (Rahul Gandhi) ಹೊಗಳಿದ್ದು, ಇದೀಗ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ.

ಫವಾದ್‌ ಅವರು ರಾಹುಲ್‌ ಗಾಂಧಿ, ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವೀಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ʼರಾಹುಲ್‌ ಆನ್‌ ಫೈಯರ್‌ʼ ಎಂದು ಬರೆದುಕೊಂಡಿದ್ದಾರೆ. ಇದನ್ನು ಸ್ಕ್ರೀನ್‌ ಶಾಟ್‌ ಹಾಕಿಕೊಂಡು ಇದೀಗ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಹುಸೇನ್ ಪೋಸ್ಟ್‌ನ ಸ್ಕ್ರೀನ್‌ಶಾಟ್  ಶೇರ್‌ ಮಾಡಿಕೊಂಡು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಇಮ್ರಾನ್ ಖಾನ್ ಸಂಪುಟದಲ್ಲಿ ಸೇವೆ ಸಲ್ಲಿಸಿದ ಫವಾದ್ ಹುಸೇನ್ ಅವರು ರಾಹುಲ್ ಗಾಂಧಿ ಪರ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡುತ್ತಿದೆಯಾ? ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಭಾಷಣದ ವೀಡಿಯೋ ತುಣುಕನ್ನು ಫವಾದ್ ಹುಸೇನ್ ಹಂಚಿಕೊಂಡಿದ್ದಕ್ಕೆ ಮತ್ತೊಬ್ಬ ಬಿಜೆಪಿ ನಾಯಕ ವಿಷ್ಣು ವರ್ಧನ್ ರೆಡ್ಡಿ ಕೂಡ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​ ಮತ್ತು ಪಾಕಿಸ್ತಾನದ ನಡುವೆ ಇರುವ ಸಂಬಂಧ ಇದರಿಂದ ಸ್ಪಷ್ಟವಾಗಿದೆ. ಮಾಜಿ ಸಚಿವ ಇಮ್ರಾನ್ ಖಾನ್ ಕ್ಯಾಬಿನೆಟ್ ಹಾಗೂ ಚೌಧರಿ ಫವಾದ್ ಹುಸೇನ್ ಈಗ ರಾಹುಲ್ ಗಾಂಧಿಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

ಪಾಕಿಸ್ತಾನದ ಮಾಜಿ ಸಚಿವ ಶೇರ್ ಮಾಡಿರುವ ವೀಡಿಯೋದಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಆಹ್ವಾನಿತರ ಬಗ್ಗೆ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಎಡಿಟ್ ಮಾಡಿದ ವೀಡಿಯೊದಲ್ಲಿ ರಾಹುಲ್ ಗಾಂಧಿ ರಾಮಮಂದಿರ ಉದ್ಘಾಟನೆಯ ಬಗ್ಗೆ ಮಾತನಾಡುವುದನ್ನು ಗಮನಿಸಬಹುದು. ಇದರಲ್ಲಿ ಬಿಜೆಪಿ ಸರ್ಕಾರವು ಬಡವರು ಮತ್ತು ಯುವಕರ ಹಿತಾಸಕ್ತಿಗಳನ್ನು ಬದಿಗೊತ್ತಿದೆ ಎಂದು ಆರೋಪಿಸಿದ್ದಾರೆ.

Share This Article