ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

Public TV
2 Min Read

ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ (SP Muddahanume Gowda) ಹಾಗೂ ಚಿತ್ರದುರ್ಗದ ಮಾಜಿ ಸಂಸದ, ಹಿರಿಯ ಚಿತ್ರನಟ ಶಶಿಕುಮಾರ್ (Shashi Kumar) ಅವರು ಇಂದು ಬೆಂಗಳೂರಿನ (Bengaluru) ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ (BJP) ಸೇರ್ಪಡೆಯಾದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಇಬ್ಬರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕಟೀಲ್ ಮತ್ತು ಸಿಎಂ ಮಾಜಿ ಸಂಸದರಾದ ಶಶಿಕುಮಾರ್ ಹಾಗೂ ಮುದ್ದಹನುಮೇಗೌಡರಿಗೆ ಪಕ್ಷದ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಈ ವೇಳೆ ಕೆಪಿಸಿಸಿ ಸದಸ್ಯರಾಗಿದ್ದ ವೆಂಕಟಾಚಲ, ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಮೈಸೂರಿನ ರಮೇಶ್ ಮುನಿಯಪ್ಪ ಬಿಜೆಪಿ ಸೇರ್ಪಡೆ ಆದರು. ರಮೇಶ್‌ ಮುನಿಯಪ್ಪ ಮಾಜಿ ಸಿಎಂ ಶೀಲಾ ದಿಕ್ಷೀತ್‌ರಿಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರು.

ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ರಾಜಕಾರಣ‌ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡು ಅಧಿಕಾರ ಕಳೆದುಕೊಳ್ಳುತ್ತಿದೆ. ಈಗ ಕಾಂಗ್ರೆಸ್‌ಗೆ ಜನಮತ ಇಲ್ಲ. ಬಹುತೇಕ ಸಚಿವರು ಸೋತಿದ್ದರು. ಆದರೂ ಕಾಂಗ್ರೆಸ್ ಹಿಂಬಾಗಿಲಿಂದ ಅಧಿಕಾರ ಪಡೆದಿತ್ತು. ಆದರೆ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದ ಪ್ರಯೋಗ ವಿಫಲವಾಯಿತು. ನಂತರ ಬಿಜೆಪಿ ಅಧಿಕಾರಕ್ಕೇರಿ ಜನಮನ್ನಣೆ ಪಡೆದಿದೆ. ಬಿಜೆಪಿ ಪರ ಸಂಪೂರ್ಣ ದಿಕ್ಸೂಚಿ ಕಾಣುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆಗಳಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರಿಗೆ ಅಲ್ಲಿ ಸೇವೆ ಮಾಡಿದ್ರೂ ಬೆಲೆ ಸಿಗುತ್ತಿದೆ. ಹಲವರಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಸಿಕ್ತಿಲ್ಲ ಅಂಥ ನಾಯಕರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದಾರೆ. ಹಲವರು ಭ್ರಮನಿರಸನಗೊಂಡು ನಮ್ಮ ಪಕ್ಷ ಸೇರಿದ್ದಾರೆ ಎಂದರು.

ಮುದ್ದ ಹನುಮೇಗೌಡ ಸಜ್ಜನ ರಾಜಕಾರಣಿ. ಮುದ್ದಹನುಮೇಗೌಡರ ಸೇರ್ಪಡೆ ನಮಗೆ ದೊಡ್ಡ ಬಲ ನೀಡಿದೆ. ಚಿತ್ರನಟ ಶಶಿಕುಮಾರ್ ನಮ್ಮಲ್ಲೇ ಇದ್ದವರು. ಈಗ ಅವರು ಮರಳಿ ನಮ್ಮಲ್ಲಿಗೆ ಬಂದಿದ್ದಾರೆ. ನಮ್ಮ ಮನೆಯೇ ಸುರಕ್ಷಿತ ಅಂತ ಶಶಿಕುಮಾರ್ ಮರಳಿದ್ದಾರೆ. ಶಶಿಕುಮಾರ್ ಸೇರ್ಪಡೆ ನಮ್ಮ ಪಕ್ಷದ ಬಲ ಹೆಚ್ಚಿಸಿದೆ. ಅನಿಲ್ ಕುಮಾರ್ ಜನಪರ ಐಎಎಸ್ ಅಧಿಕಾರಿ ಆಗಿದ್ದವರು. ಹಲವು ಸಲ ನಾವು ತಾತ್ವಿಕವಾಗಿ ಚರ್ಚೆ ಮಾಡಿದ್ದೇವೆ. ಅನಿಲ್ ಕುಮಾರ್ ಪಕ್ಷ ಸೇರ್ಪಡೆಯಿಂದ ಎಸ್ಸಿ ಸಮುದಾಯದಲ್ಲಿ ಮತ್ತು ಮೌಲಿಕ ರಾಜಕಾರಣಕ್ಕೆ ಬೆಲೆ ಬಂದಿದೆ ಎಂದು ಅಭಿಪ್ರಾಯ ಪಟ್ಟರು.

ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಅಶ್ವತ್ಥ ನಾರಾಯಣ, ಎಮ್‌ಎಲ್‌ಸಿಗಳಾದ ಲಕ್ಷ್ಮಣ ಸವದಿ, ಸಿಪಿ ಯೋಗೇಶ್ವರ್, ದೇವೇಗೌಡ, ಶಾಸಕ ಮಸಾಲೆ ಜಯರಾಮ್, ಸಚಿವ ಗೋವಿಂದ್ ಕಾರಜೋಳ, ರಾಜ್ಯಸಭೆ ಸದಸ್ಯ ಜಗ್ಗೇಶ್ ಭಾಗಿ‌ ಆಗಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *