ಉಳುವವನೇ ಭೂಮಿಯ ಒಡೆಯ ಕಾಯ್ದೆ ಈ ವಕ್ಫ್ ವಿಚಾರದಲ್ಲಿ ಯಾಕೆ ಆಗಲಿಲ್ಲ: ಪ್ರತಾಪ್ ಸಿಂಹ ಪ್ರಶ್ನೆ

Public TV
1 Min Read

– ನಮ್ಮ ನಮ್ಮಲ್ಲಿ ಗೌಡ, ಲಿಂಗಾಯತ, ಕುರುಬ, ಎಸ್‌ಸಿ ಎಂದು ಕಿತ್ತಾಡೋದು ಬೇಡ

ಬಾಗಲಕೋಟೆ: ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆ ಈ ವಕ್ಫ್ ವಿಚಾರದಲ್ಲಿ ಯಾಕೆ ಆಗಲಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ಆಯೋಜಿಸಿದ್ದ ವಕ್ಫ್ ಹಠಾವೋ, ದೇಶ ಬಚಾವೋ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರೈತರ ಭೂಮಿ ಕಬಳಿಕೆ ನಡೆಯುತ್ತಿದೆ. ಉಳುವವನೇ ಭೂಮಿ ಒಡೆಯ ಅನ್ನೋ ಕಾಯ್ದೆ ಈ ವಕ್ಫ್ ವಿಚಾರದಲ್ಲಿ ಯಾಕೆ ಆಗಲಿಲ್ಲ. ಸಿದ್ದರಾಮಯ್ಯ ಸರ್ಕಾರ ವಕ್ಫ್ ವಿರುದ್ಧ ಈ ಕಾಯ್ದೆ ಬಗ್ಗೆ ಯಾಕೆ ಮಾತಾಡ್ತಿಲ್ಲ ಎಂದು ಕೇಳಿದರು.

ಇದು ವಿಜಯಪುರ ಶಾಸಕ ಯತ್ನಾಳ್ ಹಾಗೂ ಬೆಳಗಾವಿಯ ಸಹುಕಾರ್ (ರಮೇಶ್ ಜಾರಕಿಹೊಳಿ) ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಬಂದಿರುವ ಇಷ್ಟು ಜನರನ್ನು ಕಂಡು ನಮಗೆ ಶಕ್ತಿ ಬಂದಿದೆ. ಪ್ರತಿಯೊಂದು ಜಿಲ್ಲೆಗೆ ಹೋಗ್ತೇವೆ, ದೆಹಲಿಯ ಜೆಪಿಸಿ ಮುಂದೆ ವಿಷಯ ಮಂಡಿಸ್ತೇವೆ ಎಂದು ಹೇಳಿದರು.

ನಮ್ಮ ನಮ್ಮಲ್ಲಿ ಗೌಡ, ಲಿಂಗಾಯತ, ಕುರುಬ, ಎಸ್‌ಸಿ ಎಂದು ಕಿತ್ತಾಡೋದು ಬೇಡ. ನಾವೆಲ್ಲ ಹಿಂದೂ ಎನ್ನುವ ಒಗ್ಗಟ್ಟು ಮೂಡಬೇಕು. ವಕ್ಫ್ ವಿರುದ್ಧ ಕ್ರಮ ಕೈಗೊಳ್ಳದ ಈ ಸಿದ್ದರಾಮಯ್ಯ ಸರ್ಕಾರ ತಾಲಿಬಾನಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ವಿರುದ್ಧ ಜನಾಂದೋಲನ ಕಾರ್ಯಕ್ರಮ ಈಗ ತೇರದಾಳ ಪಟ್ಟಣಕ್ಕೆ ಆಗಮಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಆಂದೋಲನ ನಡೆಯುತ್ತಿದೆ. ಸಮಾರಂಭದಲ್ಲಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಶಾಸಕ ರಮೇಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಎನ್.ಆರ್. ಸಂತೋಷ ಭಾಗಿಯಾಗಿದ್ದರು.

Share This Article