ನಾವು ಕೂಡ ಊಟ ಮಾಡಿಲ್ಲ, ಏ ಪಂಚೆ ಎಲ್ಲಿಗೆ ಹೋಗ್ತಾ ಇದ್ಯಾ ಕೂತ್ಕೋ: ಕಾರ್ಯಕರ್ತರಿಗೆ ಗದರಿದ ಮಾಜಿ ಸಿಎಂ

Public TV
3 Min Read

ಚಾಮರಾಜನಗರ: “ಏ ಕೂತ್ಕೋ, ನಾವು ಕೂಡ ಊಟ ಮಾಡಿಲ್ಲ. ಏ ಪಂಚೆ ಎಲ್ಲಿಗೆ ಹೋಗ್ತಾ ಇದ್ಯಾ” ಎಂದು ಸಮಾವೇಶದಿಂದ ಎದ್ದು ಹೊಗುತ್ತಿದ್ದವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗದರಿದ್ದಾರೆ.

ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನರು ಸಮಾವೇಶದಿಂದ ಎದ್ದು ಹೋಗುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ “ಏ ಕೂತ್ಕೋ, ನಾವು ಕೂಡ ಊಟ ಮಾಡಿಲ್ಲ. ಏ ಪಂಚೆ ಎಲ್ಲಿಗೆ ಹೋಗ್ತಾ ಇದ್ಯಾ ಕೂತ್ಕೋ. ಮುಗಿತು ಕೂತ್ಕೋ” ಎಂದು ಗದರಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, “ರಾಮ ಮಂದಿರ ಕಟ್ಟುವುದಕ್ಕೆ ನನ್ನ ವಿರೋಧವಿಲ್ಲ. ನನ್ನ ಹೆಸರಲ್ಲೂ ಕೂಡ ರಾಮ ಇದೆ. ಸಿದ್ದ – ರಾಮ ಸಿದ್ದರಾಮಯ್ಯ. ಸಿದ್ದ ಅಂದರೆ ರೆಡಿ ಅಂತಾ, ನಾನು ಯಾಕೆ ವಿರೋಧ ಮಾಡಲಿ. ಇವರು ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟಲು ಹೋಗಿ 27 ವರ್ಷ ಆಯ್ತು. ಇನ್ನೂ ಯಾಕೆ ಇವರು ರಾಮ ಮಂದಿರ ಕಟ್ಟಿಲ್ಲ. ಚುನಾವಣೆ ಬಂದಾಗ ಮಾತ್ರ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ಇಟ್ಟಿಗೆ ದುಡ್ಡು ಎಲ್ಲವನ್ನೂ ತಗೊಂಡು ರಾಮ ಮಂದಿರ ಕಟ್ಟುತ್ತೇವೆ ಎಂದು ಹೋಗಿದ್ದರು. ಬಳಿಕ ಇಟ್ಟಿಗೆನಾ ರಸ್ತೆಗೆ ಎಸೆದು ದುಡ್ಡನ್ನು ಜೇಬಿಗೆ ಹಾಕೊಂಡು ಹೋದ್ರು. ಜನರಿಂದ ಸಂಗ್ರಹ ಮಾಡಿದ ದುಡ್ಡಿನ ಲೆಕ್ಕಾ ಎಲ್ಲಿ” ಎಂದು ಸಿದ್ದರಾಮಯ್ಯ ಪ್ರಶ್ನಿಸದರು.

ತಮ್ಮ ಭಾಷಣದ ಉದ್ದಕ್ಕೂ ಮೋದಿ ಅವರನ್ನು ಸಿದ್ದರಾಮಯ್ಯ ಅನುಕರಣೆ ಮಾಡಿದ್ದು ವಿಶೇಷವಾಗಿತ್ತು. ಡಿಸೆಂಬರ್ 30, 2009ರಲ್ಲಿ ವಿಧಾನಸಭೆಯಲ್ಲಿ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಮಿಸ್ಟರ್ ಯಡಿಯೂರಪ್ಪ ಸಾಲಮನ್ನಾ ಮಾಡಿ ಎಂದು ಹೇಳೋದಕ್ಕೆ ನಿಮಗೆ ಯಾವ ನೈತಿಕತೆ ಇದೆ? ಸಮ್ಮಿಶ್ರ ಸರ್ಕಾರದಿಂದ 36 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುತ್ತಿದ್ದೇವೆ. ರೈತರಿಗೆ ನೀವೇನು ಮಾಡಿದ್ದೀರಿ ಮೋದಿಯವರೇ? ಸಿಲಿಂಡರ್ ಗ್ಯಾಸ್ ಬೆಲೆ 450 ರೂ. ಯಿಂದ 1 ಸಾವಿರಕ್ಕೆ ಏರಿಕೆಯಾಗಿದ್ದೆ ಅಚ್ಚೇದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾಗಲಿಲ್ಲ. ಲಕ್ಷಾಂತರ ಕೋಟಿ ಉಳಿತಾಯವಾಗಿದೆ. ಎಲ್ಲಿ ಹೋಯ್ತು ಈ ಹಣ ರಾಷ್ಟ್ರದ ಜನತೆಗೆ ಲೆಕ್ಕ ಕೊಡಿ ಮೋದಿಯವರೇ. ಪ್ರತಿಯೊಬ್ಬರ ಅಕೌಂಟ್‍ಗೆ 15 ಲಕ್ಷ ಹಣ ಹಾಕ್ತೀವಿ ಎಂದು ಹೇಳಿದ್ರಿ. ಆದರೆ 15 ಲಕ್ಷ ಇರಲಿ 15 ಪೈಸೆನೂ ಹಾಕಲಿಲ್ಲ. ನಿಮಗೆ ಯಾರೋಬ್ಬರಿಗೆ 15 ರೂ. ಬಂದಿದ್ದರೆ ನಾನು ಮೋದಿ ಬಗ್ಗ ಟೀಕೆ ಮಾಡುವುದನ್ನು ಬಿಡುತ್ತೇನೆ ಎಂದ ಅವರು ಪಾಕಿಸ್ತಾನದ ವಿರುದ್ಧ ಕಾಂಗ್ರೆಸ್ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವು. ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವು. ಆದರೆ ಈಗ ಪದೇ ಪದೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟ್ಟಿದ್ದಾರೆ ಎಂದು ದೂರಿದರು.

ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋದರೆ ಅವರು ಅಂಬೇಡ್ಕರ್ ವಿರೋಧಿಗಳು. ಏಕೆಂದರೆ ಬಿಜೆಪಿಗೆ ಮತ ಹಾಕಿದರೆ ನಾವೇ ಆತ್ಮಹತ್ಯೆ ಮಾಡಿಕೊಂಡಂತೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿಗೆ ಒಂದೇ ಒಂದು ಮತ ಕೊಡಬಾರದು. ಪರ ಧರ್ಮ ಸಹಿಷ್ಣುತೆ, ಸಹಬಾಳ್ವೆ ನಮ್ಮ ಮಂತ್ರ ಆಗಬೇಕು. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಕಳೆದ ಬಾರಿ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಸಿದ್ದರಾಮಯ್ಯ ಹಿಂದೂ ವಿರೋಧಿ, ಮುಸ್ಲಿಮರ ಪರ ಎಂದರು. ಆದರೆ ನಾನು ಬಡವರ ಪರ ಇರುವುದು ನಿಜ, ಮುಸ್ಲಿಂರ ಪರ ಇರುವುದು ನಿಜ. ದಲಿತರ ಪರ ಇರುವುದು ನಿಜ, ಹಿಂದುಳಿದವರ ಪರ ಇರುವುದು ನಿಜ. ನಾನು ಎಲ್ಲ ಜಾತಿಯವರ ಪರ ಇದ್ದೇನೆ. ಅಕ್ಕಿ ಕೊಟ್ಟಿದ್ದು, ಹಾಲಿಗೆ ಸಬ್ಸಿಡಿ ನೀಡಿದ್ದು, ಇಂದಿರಾ ಕ್ಯಾಂಟೀನ್ ಮಾಡಿದ್ದು, ಸಾಲಮನ್ನಾ ಮಾಡಿದ್ದು ಎಲ್ಲ ವರ್ಗದವರಿಗಾಗಿ. ಯಡಿಯೂರಪ್ಪ ಅವರ ಅವಧಿಯಲ್ಲಿ ಏನು ಮಾಡಿದರು? ಜೈಲಿಗೆ ಹೋಗಿದ್ದನ್ನು ಬಿಟ್ಟರೆ ಬೇರೇನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *