ಟ್ರಂಪ್ ಗೆಲ್ಲಿಸಲು ಮೋದಿ ಅಮೆರಿಕಕ್ಕೆ, ಅನರ್ಹರ ರಕ್ಷಣೆಗೆ ಬಿಎಸ್‍ವೈ ದೆಹಲಿಗೆ – ತಿಮ್ಮಾಪೂರ್

Public TV
2 Min Read

ಬಾಗಲಕೋಟೆ: ಪ್ರಧಾನ ಮಂತ್ರಿಗಳು ಅಮೆರಿಕ, ಇಂಗ್ಲೆಂಡ್ ಅಂತ ವಿದೇಶ ಸುತ್ತುತ್ತಿದ್ದಾರೆ. ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅನರ್ಹ ಶಾಸಕರ ರಕ್ಷಣೆಗಾಗಿ ದೆಹಲಿಗೆ ಹೋಗುತ್ತಿದ್ದಾರೆ. ಇವರಿಗೆ ರಾಜ್ಯದ ರೈತರ ಕಷ್ಟ ಕಾಣಿಸುತ್ತಿಲ್ಲ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಹಾಗೂ ಸಂತ್ರಸ್ತರಿಗೆ ಇನ್ನೂ ಪರಿಹಾರ ಘೋಷಿಸದೇ ಇರುವುದು ನೋವಿನ ಸಂಗತಿ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಆದರೆ, ಟ್ರಂಪ್ ಗೆಲ್ಲಿಸಲು ನರೇಂದ್ರ ಮೋದಿ ಅಮೆರಿಕಗೆ ಹೋಗಿದ್ದಾರೆ. ಪುಣ್ಯಾತ್ಮ ನಿಮ್ಮನ್ನು ಗೆಲ್ಲಿಸಿದ ಈ ಜನರನ್ನು ನೋಡಪ್ಪಾ. ಐಟಿ, ಇಡಿ ಬಳಸಿಕೊಂಡು ಕಾಂಗ್ರೆಸ್ ನವರನ್ನೇ ಗುರಿಯಾಗಿಸಿಕೊಂಡಿದ್ದೀರಿ. ನೀವು ಒಬ್ಬರನ್ನು ಮುಗಿಸಿದರೆ, ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್‍ನಲ್ಲಿ ಹುಟ್ಟಿಕೊಳ್ಳುತ್ತಾರೆ. ಭಸ್ಮಾಸುರನ ರೀತಿಯಲ್ಲಿ ನೀವು ನಡೆದುಕೊಳ್ಳುತ್ತಿರುವ ರೀತಿಗೆ ಒಂದಿಲ್ಲ ಒಂದು ದಿನ ಆ ಶಿಕ್ಷೆಯನ್ನು ನೀವು ಎದುರಿಸುತ್ತೀರಿ ಎಂದು ಕಿಡಿಕಾರಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರೆ ಪರಿಹಾರದಲ್ಲಿ ನಿಷ್ಕಾಳಜಿ ವಹಿಸಿವೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಮನೆ, ಮಠ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಕಾಲ ಕಳಿಯುತ್ತಿರುವುದು ನೋವಿನ ವಿಚಾರ. ತುರ್ತು ಪರಿಹಾರ ನೀಡಿರುವ 10 ಸಾವಿರ ರೂ. ಪರಿಹಾರದ ಸರ್ವೆ ಕಾರ್ಯವನ್ನೇ ಸರ್ಕಾರ ಇನ್ನೂ ಮುಗಿಸಿಲ್ಲ. ಜನತೆಗೆ ಸಹಾಯ ಮಾಡುವುದನ್ನು ಬಿಟ್ಟು, ಸರ್ಕಾರ ಕಾಟಾಚಾರಕ್ಕೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಾಳಿದೆ. ಉತ್ತರ ಕರ್ನಾಟಕಕ್ಕೆ ಇಬ್ಬರು ಡಿಸಿಎಂಗಳು ಬಂದರು, ನಮ್ಮ ಭಾಗ್ಯ ತರೆಯುತ್ತದೆ ಅಂದುಕೊಂಡೆವು. ಭಾಗ್ಯ ತೆರೆಯಲಿಲ್ಲ, ಭಾಗ್ಯದ ಬಾಗಿಲೇ ಬಂದ್ ಆಗಿದೆ. ಮುಧೋಳಕ್ಕೆ ಬಂದು ನೋಡಿದರೆ ಡಿಸಿಎಂ ಅವರಿಗೆ ತಿಳಿಯುತ್ತದೆ. ಸಂತ್ರಸ್ತರ ಮಕ್ಕಳು ಬೀದಿಯಲ್ಲಿ ಕುಳಿತು ಓದುತ್ತಿದ್ದಾರೆ. ಸರ್ಕಾರ ಯಾವಾಗ ಅಪ್ಪಣೆ ಕೊಡುತ್ತದೆ ಎಂದು ಅಧಿಕಾರಿಗಳು ಕಾಯುತ್ತಿದ್ದಾರೆ ಎಂದರು.

ಈ ಹಿಂದೆಯೂ ಯಡಿಯೂರಪ್ಪ ಅನೈತಿಕವಾಗಿಯೇ ಅಧಿಕಾರಕ್ಕೆ ಏರಿದ್ದರು. ಈಗಲೂ ಅನೈತಿಕತೆಯಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಕೈಯಲ್ಲಿ ಏನೂ ಇಲ್ಲ. ಗುಜರಾತಿಗಳು ಬಿಎಸ್‍ವೈ ಅವರನ್ನು ಗಮನಿಸುತ್ತಿದ್ದಾರೆ. ಸಿಎಂ ಹಾಗೂ ಅವರ ಸಚಿವರು ಏನು ಮಾಡುತ್ತಿದಾರೆ ಎಂದು ಗುಜರಾತಿಗಳು ನೋಡುತ್ತಿದ್ದಾರೆ. ಹೀಗೆ ಮಾಡುವುದಾದರೆ ನೀವೇ (ಗುಜಾರಾತಿಗಳು) ಇಲ್ಲಿ ಬಂದು ಅಧಿಕಾರ ನಡೆಸಿ. ಯಡಿಯೂರಪ್ಪನವರಂಥ ಅಸಹಾಯಕ ಮುಖ್ಯಮಂತ್ರಿ ರಾಜ್ಯಕ್ಕೆ ಸಿಕ್ಕಿದ್ದು ಇದೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿನ ಅನರ್ಹರು ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ನಡೆಯುವ 15ಕ್ಕೆ 15 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ನಮ್ಮ ಪಕ್ಷದಿಂದ ಹೋದ ಅನರ್ಹ ಶಾಸಕರಿಗೆ ಜನ ಖಂಡಿತ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರ್ಟ್ ಅನುಮತಿ ನೀಡುವುದಿಲ್ಲ ಎಂಬ ಭರವಸೆ ಇದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *