4 ವರ್ಷ ಜೈಲಲ್ಲಿ ಕೊಳೆಸಿದ್ರು – ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲ ಅಂದ್ರು ರೆಡ್ಡಿ

Public TV
4 Min Read

– ದುಡ್ಡು ಸಿಕ್ಕಿದ್ದು ನನ್ನ ಮನೆಯಲ್ಲಿ ಅಲ್ಲ, ಡಿಕೆಶಿ ಮನೆಯಲ್ಲಿ

ಚಿತ್ರದುರ್ಗ: ಜನರ ದಿಕ್ಕು ತಪ್ಪಿಸಿ ಬಳ್ಳಾರಿ ಅಭಿವೃದ್ಧಿ ಮಾಡಲಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನೇ ಮಾಡಿದ್ರು. ನನ್ನ ಜೀವಮಾನದ 4 ವರ್ಷದ ಅಮೂಲ್ಯ ವೇಳೆಯನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ರು. ನನ್ನ ವಿರುದ್ಧ ಎಷ್ಟು ಸಾವಿರ ಕೋಟಿ ಚಾರ್ಜ್ ಶೀಟ್ ಹಾಕಿದ್ದಾರೆ ಅನ್ನೋದನ್ನ ಜನರಿಗೆ ಹೇಳಲಿ. ನೂರು ಕೋಟಿ ಚಾರ್ಜ್ ಶೀಟ್ ಹಾಕಿ ಜನರನ್ನ ದಿಕ್ಕು ತಪ್ಪಿಸಿದ್ರು ಅಂತ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಬಳ್ಳಾರಿಯಿಂದ 7 ವರ್ಷಗಳಿಂದ ದೂರು ಇದ್ದೇನೆ. ಬಳ್ಳಾರಿ ಜನರನ್ನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಶ್ರೀರಾಮುಲು ಒಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ. ರಾಮುಲು ಒಂಟಿಯಾಗಿದ್ರೂ ಬಳ್ಳಾರಿ ಜನರು ಅವರನ್ನ ಮನೆ ಮಗನಂತೆ ಜೋಪಾನ ಮಾಡುತ್ತಿದ್ದು, ಮನೆ ಮಗನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ ಅಂದ್ರು.

2008ರಿಂದ ಬಿಜೆಪಿ ಬಾವುಟವನ್ನ ಬಳ್ಳಾರಿಯಲ್ಲಿ ಹಾರಿಸುತ್ತಿದ್ದಾರೆ. ಶ್ರೀರಾಮುಲು, ಕರುಣಾಕರರೆಡ್ಡಿ, ಶಾಂತಾ ಮೂಲಕ ಬಿಜೆಪಿ ಎಂಪಿ ಸ್ಥಾನ ಗಳಿಸಿದೆ. ಬಳ್ಳಾರಿ ಜನರು ಈ ಬಾರಿಯೂ ಜನರು ಕೈಬಿಡಲ್ಲ. ಶಾಂತಾ ಬಗ್ಗೆ ಕೆಲವರು ಕೆಲವು ಮಾತನಾಡುತ್ತಿದ್ದಾರೆ. ಶ್ರೀರಾಮುಲುರಿಂದ ಉಪಚುನಾವಣೆ ಬಂದಿದೆ ಅಂತಾ ಆರೋಪ ಮಾಡುತ್ತಿದ್ದಾರೆ. ಶ್ರೀರಾಮುಲು ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಯಾಕೆ ಸೇರಿದ್ರು ಎಂದು ಅವರು ಪ್ರಶ್ನಿಸಿದ್ರು.

ರಕ್ಷಣೆ ಕೊಡಲಿಲ್ಲ:
ಕಳೆದ 7 ವರ್ಷಗಳಲ್ಲಿ ನನಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆನು. ಆದ್ರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನಗೆ ರಕ್ಷಣೆ ಸಹ ಕೊಡಿಸಲಿಲ್ಲ. ಬೆಂಗಳೂರಿನ ನನ್ನ ಮನೆ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಚುನಾವಣೆ ಮುಗಿಯುವುದರೊಳಗೆ ಇನ್ನೂ ಏನಾದ್ರೂ ಆಗಬಹುದು. ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ನಾನು ಯಾರಿಗೂ ಹೆದರಲ್ಲ. ಹೆದರೋ ಪ್ರಶ್ನೆಯೇ ಇಲ್ಲ. ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ನನಗೆ ವೈ ಕೆಟಗೆರಿ ಭದ್ರತೆ ಇದೆ. ನಾನು ಲಿಖಿತವಾಗಿ ರಕ್ಷಣೆ ನೀಡಿ ಅಂದ್ರೂ ಇಲ್ಲಿ ಕೊಡುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

ಶ್ರೀರಾಮುಲು ಅಂದ್ರೆ ಅಭಿವೃದ್ಧಿ:
ಸಿದ್ದರಾಮಯ್ಯ ಶೋಭೆ ತರುವಂತಹ ಮಾತುಗಳನ್ನು ಆಡುತ್ತಿಲ್ಲ. ಬಳ್ಳಾರಿಯಲ್ಲಿ 3 ಭಾರಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಕಾಂಗ್ರೆಸ್‍ನ ಭದ್ರಕೋಟೆಯನ್ನ ರಾಮುಲು ಬಿಜೆಪಿಯ ಭದ್ರಕೋಟೆಯಾಗಿ ಮಾಡಿದ್ದಾರೆ. ಕರ್ನಾಟಕದ ಹೆಸರನ್ನ ವಿಶ್ವದ ಜನರೆಲ್ಲ ನೋಡುವ ಹಾಗೆ ಗೋಲ್ಡನ್ ಚಾರಿಯಟ್ ಟ್ರೈನ್ ತಂದರು. ಪ್ರವಾಸೋದ್ಯಮ ಮಂತ್ರಿಯಾಗಿ, ಆರೋಗ್ಯ ಸಚಿವರಾಗಿ 108 ಜಾರಿಗೆ ತರೋ ಮೂಲಕ ಹಳ್ಳಿಯ ಜನರಿಗೆ ಜೀವ ಉಳಿಸುವ ಕೆಲಸ ಮಾಡಿದ್ರು. ಈ ಮೂಲಕ ಶ್ರೀರಾಮುಲು ಅಂದ್ರೆ ಅಭಿವೃದ್ಧಿ ಅಂತ ಅವರು ಹೇಳಿದ್ರು.

ಸಿದ್ದರಾಮಯ್ಯಗೆ ಮಾನವೀಯತೆ ಇಲ್ಲ:
ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿದ ವೇಳೆ ಲಕ್ಷ ಕೋಟಿ ಲೂಟಿ ಮಾಡಿದ್ರು ಅಂತಾ ಆರೋಪ ಮಾಡಿದ್ದರು. ಲೂಟಿ ಮಾಡಿದ ಲಕ್ಷ ಕೋಟಿ ಹಣದಲ್ಲಿ ರಾಜ್ಯದ ಜನರಿಗೆ ಮನೆ ಕಟ್ಟಿಸಿಕೊಡುತ್ತೀನಿ ಅಂದ್ರು. ಸಿದ್ದರಾಮಯ್ಯನವರಿಗೆ ಮಾನವೀಯತೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಅಧಿಕಾರದಲ್ಲಿದ್ದಾಗ ನನ್ನಿಂದ ಎಷ್ಟು ಹಣ ವಸೂಲಿ ಮಾಡಿದ್ರು ಅಂತ ಹೇಳಬೇಕು. ನಾನು ಒಂದು ಲಕ್ಷ ಕೋಟಿ ಹಣ ಲೂಟಿ ಮಾಡಿದ್ದೀನಿ ಅಂತಾ ಹೇಳಿದ್ರು. ಇನ್ನೊಂದು ಬಾರಿ ಫೇಸ್ ಬುಕ್ ನಲ್ಲಿ 25 ಸಾವಿರ ಕೋಟಿ ಲೂಟಿ ಅಂದ್ರು. ರಾಹುಲ್ ಗಾಂಧಿ 35 ಸಾವಿರ ಕೋಟಿ ಲೂಟಿ ಅಂದ್ರು. ಸಿದ್ದರಾಮಯ್ಯ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಬೇಕು ಅಂದುಕೊಂಡಿದ್ದೆ. ಆದ್ರೆ ಮಾನವೇ ಇಲ್ಲದವರ ವಿರುದ್ಧ ಮಾನನಷ್ಟ ಯಾಕೆ ಅಂತ ಸುಮ್ಮನಾಗಿದ್ದೆ ಅಂತ ಅವರು ತಿಳಿಸಿದ್ರು.

ನನ್ನಿಂದ ಒಂದು ಲಕ್ಷ ಕೋಟಿ ಅಲ್ಲ ಒಂದು ಕೋಟಿ ಸಹ ವಸೂಲಿ ಮಾಡಲು ಆಗಲಿಲ್ಲ. ಸಿದ್ದರಾಮಯ್ಯ, ರಾಹುಲ್ ಅಯೋಗ್ಯ ಅಂತಾ ಕರಿಬೇಕಾ? ನನ್ನ ಜೊತೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಆನಂದ್ ಸಿಂಗ್, ನಾಗೇಂದ್ರರನ್ನ ಇದೀಗ ಜೊತೆಗೆ ಇಟ್ಟುಕೊಂಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

ಆರೋಪ ಮಾಡಲು ನೈತಿಕತೆಯಿಲ್ಲ:
ರಾಮುಲು 420, 307 ಆರೋಪ ಹಿನ್ನೆಲೆ ಕುರಿತು ಮಾತನಾಡಿದ ಅವರು, ಶ್ರೀರಾಮುಲು ತನ್ನ ಜೇಬು, ಕೈನಲ್ಲಿದ್ದ ಹಣ ಬಂಗಾರವನ್ನೆಲ್ಲಾ ಕಷ್ಟದಲ್ಲಿದ್ದ ಜನರಿಗೆ ನೀಡಿದವರಾಗಿದ್ದಾರೆ. ಇನ್ನೊಬ್ಬರಿಗೆ ಸಹಾಯ ಮಾಡೋ ವ್ಯಕ್ವಿತ್ವ ಶ್ರೀರಾಮುಲು ಅವರದ್ದಾಗಿದೆ. ಅವರು ಮುಖ್ಯಮಂತ್ರಿಯಾಗದಿದ್ದರೂ 50 ಸಾವಿರ ಸಾಮೂಹಿಕ ವಿವಾಹ ಮಾಡಿದ್ರು. ನಿಮ್ಮ ಜೊತೆ ಇರೋ ಡಿಕೆ ಶಿವಕುಮಾರ್ ದೆಹಲಿ ಮನೆಯಲ್ಲಿ ಸಾಕಷ್ಟು ಹಣ ಸಿಕ್ತು. ಆದ್ರೆ ನನ್ನ ಮನೆಯಲ್ಲಿ ಹಣ ಸಿಗಲಿಲ್ಲ. ಡಿಕೆ ಶಿವಕುಮಾರ್ ಮನೆಯಲ್ಲಿ ಹಣ ಸಿಕ್ಕಾಗ ತಲೆ ತಗ್ಗಿಸಬೇಕಾಗಿತ್ತು. ನನ್ನ ವಿರುದ್ಧ ಆರೋಪ ಮಾಡೋಕೆ ನಿಮಗೆ ನೈತಿಕತೆಯಿಲ್ಲ ಅಂತ ಅವರು ಕಿಡಿಕಾರಿದ್ರು.

ಬಹಿರಂಗ ಚರ್ಚೆಗೆ ಸಿದ್ಧ:
ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಶ್ರೀರಾಮುಲು ಜೊತೆ ಬಹಿರಂಗ ಚರ್ಚೆ ಬೇಡ. ನಿಮಗೆ ತಾಕತ್ತು ಅಂತ ಇದ್ದರೆ ಅಂಕಿ ಅಂಶಗಳ ಸಮೇತ ಚರ್ಚೆಗೆ ಬರುವೆನು. ನಾನು ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ. ನಾನು ನಾಳೆ ನಾಡಿದ್ದು ಇಲ್ಲೇ ಇರುತ್ತೇನೆ. 420, 307 ಅನ್ನೋ ಮೂಲಕ ಇಡಿ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ. ವಾಲ್ಮೀಕಿ ಜಯಂತಿಯಲ್ಲಿ ಸಿಎಂ ಅನಾರೋಗ್ಯ ಸರಿಯಿಲ್ಲದ ಪರಿಣಾಮ ಹಾಜರಾಗಲಿಲ್ಲ. ಆದ್ರೆ ಡಿಸಿಎಂ ಪರಮೇಶ್ವರ್ ಆರೋಗ್ಯಕ್ಕೆ ಏನು ಆಗಿತ್ತು. ದೇವೇಗೌಡರಿಗೆ ವಾಲ್ಮೀಕಿ ಸಮುದಾಯದ ಪ್ರಶಸ್ತಿ ಸ್ವೀಕಾರ ಮಾಡಲಿಲ್ಲ. ಮರ್ಹಷಿ ವಾಲ್ಮೀಕಿ ಪ್ರಶಸ್ತಿ ಸ್ವೀಕಾರ ಮಾಡದೇ ಅಪಮಾನ ಮಾಡಿದ್ರು ಅಂತ ಸಿಡಿಮಿಡಿಗೊಂಡರು.

ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದ್ರು. ಅದಕ್ಕೆ ಅಧಿಕಾರ ಕಳೆದುಕೊಂಡರು. ಅವತ್ತು ಡಿಕೆ ಶಿವಕುಮಾರ್ ಮನಸಾಕ್ಷಿ ಇರಲಿಲ್ಲವೇ. ಲಿಂಗಾಯತ ಧರ್ಮ ಒಡೆಯುವ ವೇಳೆ ಸ್ವಾಮೀಜಿಗಳ ಹಗಲಿರುಳು ಹೋರಾಟ ಮಾಡಿದ್ರು. ಅವರ ಶಾಪ ನಿಮಗೆ ತಟ್ಟಿದೆ. ಇನ್ನೂ ಕಾಂಗ್ರೆಸ್ ಗೆ ಶಾಪ ತಟ್ಟುತ್ತೆ ಅಂತ ಭವಿಷ್ಯ ನುಡಿದ್ರು.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *