ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

Public TV
2 Min Read

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *