ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಿಎಂಗೆ ಸಿ.ಟಿ.ರವಿ ಟಾಂಗ್‌

Public TV
2 Min Read

– ಕಾಂಗ್ರೆಸ್‌ ಪಕ್ಷ ದಲಿತರನ್ನು ನಿಜಕ್ಕೂ ಸಿಎಂ ಮಾಡುತ್ತಾ ಎಂದು ಪ್ರಶ್ನೆ

ಚಿಕ್ಕಮಗಳೂರು: ಭ್ರಷ್ಟಾಚಾರ ಭ್ರಷ್ಟಾಚಾರವೇ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ (C.T.Ravi) ಟಾಂಗ್‌ ಕೊಟ್ಟರು.

ಚಿಕ್ಕಮಗಳೂರಿನ (Chikkamagaluru) ಸೆಂಟ್ರಲ್ ಲೈಬ್ರರಿ ಬಳಿ ಮಾತನಾಡಿದ ಅವರು, ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಸಿಎಂ ಸಿದ್ದರಾಮಯ್ಯನವರು (Siddaramaiah) ನಾನು ಯಾರಿಗೂ ಹೆದರಲ್ಲ, ಬಿಜೆಪಿ-ಜೆಡಿಎಸ್‌ಗೆ ಹೆದರಲ್ಲ, ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದಾರೆ‌. ಹಾಗಾದರೆ, ನಾವು ನಿಮ್ಮನ್ನ ಏನೆಂದು ಕರೆಯಬೇಕೆಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾದ್ರೂ ರಾಜ್ಯಕ್ಕೆ ಪ್ರಯೋಜನ ಆಗ್ತಿಲ್ಲ: ಕೃಷ್ಣಬೈರೇಗೌಡ ಟಕ್ಕರ್‌

ಸಿಎಂಗೆ ಸಂವಿಧಾನ-ಕಾನೂನಿನ ಬಗ್ಗೆ ಭಯವಿಲ್ಲ.‌ ನೈತಿಕತೆ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಅವರು ಜನರಿಗಿಂತಾ ದೊಡ್ಡವರಾ? ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರಲ್ಲ ಅಂದ್ರೆ, ನಾವು ಮನುಷ್ಯರು ಅನ್ಕೊಳ್ಳಾದಾ? ರಾಕ್ಷಸರು ನಾವು ಯಾರಿಗೂ ಹೆದರಲ್ಲ ಅಂತಿದ್ರಂತೆ, ಹಾಗೇ ಅನ್ಕೋಬೇಕಾ ಎಂದು ವ್ಯಂಗ್ಯವಾಡಿದರು.‌

ರಾಯಚೂರಿನ ಸಮಾವೇಶದ ಕುರಿತು ಮಾತನಾಡಿ, ಅಧಿಕಾರ-ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಆಗಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದೋನು‌ ನೀರು ಕುಡಿಯಬೇಕು, ಅದು ಪ್ರಕೃತಿ ಧರ್ಮ ಎಂದರು. ಇದನ್ನೂ ಓದಿ: ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರಿದರೆ ಸಮಸ್ಯೆ ಇಲ್ಲ. ‌ಆದರೆ, ಸಮಾಜ‌ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯ ಮಾಡಿದ್ರೆ ಮಾತ್ರ ಯಾರೂ ಕ್ಷಮಿಸಲ್ಲ. ಆದರೆ ಹೆಚ್.ಎಂ.ರೇವಣ್ಣ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರೋಧಿಸಿದ್ದು ಎಂದಿದ್ದಾರೆ. ವಿರೋಧಿಸಿದ್ದು ಆರ್‌ಎಸ್‌ಎಸ್, ಬಿಜೆಪಿ ಅಲ್ಲ. ನೆಹರೂ ವಿರೋಧಿಸಿದ್ದು. ರಾಹುಲ್ ಗಾಂಧಿಯವರ ಮುತ್ತಜ್ಜ, ಇಂದಿರಾ ಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ ನೆಹರೂ ಮೀಸಲಾತಿ ವಿರೋಧಿಸಿದ್ದು. ಅಭಿವೃದ್ಧಿ, ದಕ್ಷತೆಗೆ ಅಡ್ಡಿಯಾಗುತ್ತದೆಂದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರೂ.‌ ರೇವಣ್ಣ ತಪ್ಪು ತಿಳಿದಿದ್ದಾರೆ. ಕಾಂಗ್ರೆಸ್ಸಿಗರು ಮೀಸಲಾತಿಗೆ ವಿರೋಧ ಇದ್ದು, ಈಗ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡಲ್‌ ಆಯೋಗವನ್ನ ಅಡಿಗೆ ಹಾಕಿಕೊಂಡು ಕೂತಿದ್ದು ಕಾಂಗ್ರೆಸ್. ಆರ್‌ಎಸ್‌ಎಸ್, ಬಿಜೆಪಿ ವಿರೋಧ ಮಾಡಿಲ್ಲ, ಮಾಡೋದು ಇಲ್ಲ. ಕಾಂಗ್ರೆಸ್ ದಲಿತರನ್ನ ಸಿಎಂ ಮಾಡೋದಾಗಿದ್ರೆ ಪರಮೇಶ್ವರ್ ಅವರನ್ನ ಏಕೆ ಸೋಲಿಸ್ತಿದ್ರು?‌ ಕಾಂಗ್ರೆಸ್‌ನದ್ದು ಯೂಸ್ ಆ್ಯಂಡ್‌ ಥ್ರೋ ಅಷ್ಟೆ. ಉಪಯೋಗಿಸಿಕೊಳ್ಳುವುದು, ಬಿಸಾಕೋದು ಅವರ ನೀತಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು.‌ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರನ್ನೇ ಹೆಚ್ಚಿನ ರಾಜ್ಯಗಳಲ್ಲಿ ಸಿಎಂ ಮಾಡಿತ್ತು. ಆದರೆ, ಅವರು ಗೆಲ್ಲದಂತೆ ನೋಡಿಕೊಂಡು ಸೋಲಿಸಿದರು. ಖರ್ಗೆ 60 ವರ್ಷ‌ ರಾಜಕಾರಣ ಮಾಡಿದ್ದಾರೆ. 60 ವರ್ಷ ದಾಟಿದೆ. ಅಷ್ಟು ವರ್ಷದ ರಾಜಕಾರಣದಲ್ಲಿ ಅಷ್ಟು ಸಿನಿಯಾರಿಟಿ ಇದ್ರೂ ಸಿಎಂ ಆಗ್ಲಿಲ್ಲ. ಕಾಂಗ್ರೆಸ್ ಪಕ್ಷ ದಲಿತರನ್ನ ನಿಜಕ್ಕೂ ಸಿಎಂ ಮಾಡುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನದ್ದು 80 ಪರ್ಸೆಂಟ್‌ ಭ್ರಷ್ಟಾಚಾರ ಸರ್ಕಾರ: ಕಟೀಲ್‌ ವಾಗ್ದಾಳಿ

Share This Article