ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಮೂರು ಪಲ್ಟಿ – ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಪಾರು

Public TV
1 Min Read

ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ (Bhaskar Rao) ಅವರು ಕಾರು ಅಪಘಾತದಿಂದ ಪಾರಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಇವರಿದ್ದ ಕಾರು ಅಪಘಾತವಾಗಿದ್ದು (Accident) ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಏ.23 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದ್ದು ಇಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಘಟನೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಸರ್ವಿಸ್‌ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿಗೆ ಮನವಿ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಏಪ್ರಿಲ್ 23 ರಂದು ಟಯೋಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಅನಂತಪುರ ಮತ್ತು ಕದ್ರಿ (ಆಂಧ್ರಪ್ರದೇಶ) ನಡುವೆ ಚಾಲನೆ ಮಾಡುವಾಗ ರಸ್ತೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಹೆದ್ದಾರಿಯಲ್ಲಿ ಯಾವುದೇ ಎಚ್ಚರಿಕೆ ಫಲಕಗಳಿಲ್ಲದ ಕಾರಣ ಟಿಪ್ಪರಿಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.

ನಮ್ಮ ಕಾರು ಮೂರು ಬಾರಿ ಪಲ್ಟಿಯಾಗಿದ್ದು ನಾವೆಲ್ಲರೂ ಅಪಾಯದಿಂದ ಪಾರಾಗಿದ್ದೇವೆ. ವೆಂಕಿ ತೀವ್ರವಾಗಿ ಗಾಯಗೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ನನ್ನ ಪಕ್ಕೆಲುಬುಗಳು ಮುರಿದಿದ್ದು, ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳು ನಮ್ಮನ್ನು ಉಳಿಸಿದೆ. ಅಪಘಾತವಾದ ನಂತರ ನಮ್ಮನ್ನು ಕಾರಿನಿಂದ ಹೊರಗೆ ಎಳೆದು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆಂಧ್ರಪ್ರದೇಶ ಸರ್ಕಾರದ ಆರೋಗ್ಯ ಕೇಂದ್ರವನ್ನು ಮೆಚ್ಚಲೇಬೇಕು. ಅಂಬುಲೆನ್ಸ್‌ ಮೂಲಕ ನನ್ನನ್ನು ಅನಂತಪುರಕ್ಕೆ ದಾಖಲಿಸಲಾಯಿತು. ಉತ್ತಮ ಕೆಲಸ ಮಾಡಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

40 ವರ್ಷಗಳಿಂದ ನಾನು ವಾಹನ ಚಲಾಯಿಸುತ್ತಿದ್ದರೂ ಅಪಘಾತ ಸಂಭವಿಸಿದೆ. ಅತ್ಯುತ್ತಮ ಹೆದ್ದಾರಿಗಳ ಜೊತೆಗೆ ನಮಗೆ ಸರ್ವಿಸ್‌ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಈ ಅಪಘಾತದ ತನಿಖೆ ನಡೆಸುವಂತೆ ಟಯೋಟಾ ಕಂಪನಿಗೆ ವಿನಂತಿಸಿದ್ದಾರೆ.

 

Share This Article