ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಕ್ಷಮೆ ಕೇಳಿದ ಫಾರೂಖ್

Public TV
2 Min Read

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ ಬೆನ್ನಲ್ಲೇ ಭಾರತ ತಂಡದ ಮಾಜಿ ಕ್ರಿಕೆಟರ್ ಫಾರೂಖ್ ಇಂಜಿನಿಯರ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯ ಅನುಷ್ಕಾ ಶರ್ಮಾ ಅವರಿಗೆ ಟೀ ತಂದುಕೊಟ್ಟಿದ್ದು ನಿಜ. ಆದರೆ ಅನುಷ್ಕಾರನ್ನು ನೋಯಿಸಲು ಉದ್ದೇಶ ಪೂರ್ವಕವಾಗಿ ಹಾಗೆ ಮಾತನಾಡಿಲ್ಲ ಎಂದು ಫಾರೂಖ್ ಇಂಜಿನಿಯರ್ ಯೂಟರ್ನ್ ಹೊಡೆದಿದ್ದಾರೆ.

ಅನುಷ್ಕಾ ಒಬ್ಬ ಪ್ರೀತಿಯ ಹುಡುಗಿ. ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಉತ್ತಮ ನಾಯಕ ಹಾಗೂ ರವಿಶಾಸ್ತ್ರಿ ಕೂಡ ಅತ್ಯುತ್ತಮ ಕೋಚ್ ಆಗಿದ್ದಾರೆ. ಈ ಪ್ರಕರಣವನ್ನು ಇಲ್ಲೆ ಬಿಟ್ಟು ಬಿಡೋಣ ಎಂದು ಫಾರೂಖ್ ಮನವಿ ಮಾಡಿಕೊಂಡಿದ್ದಾರೆ.

ಆಗಿದ್ದೇನು?:
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫಾರೂಖ್ ಅವರು, ಭಾರತ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದರು. ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ನೇತೃತ್ವದ ಸಮಿತಿಯನ್ನು `ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ` ಎಂದು ಹೀಯಾಳಿಸಿದ್ದರು. ಇದೇ ವೇಳೆ ವಿವಾತಾತ್ಮಕ ಹೇಳಿಕೆಯೊಂದನ್ನು ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ 2019ರ ವಿಶ್ವಕಪ್ ವೇಳೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಟೀ ಸರ್ವ್ ಮಾಡಿದ್ದನ್ನು ನಾನು ನೋಡಿದ್ದೆ. ಸೂಟ್ ಧರಿಸಿದ್ದ ಟೀ ತಂದುಕೊಟ್ಟ ವ್ಯಕ್ತಿ ಯಾರೆಂದು ಕೇಳಿದ್ದೆ. ಆಗ ಆ ವ್ಯಕ್ತಿ ಆಯ್ಕೆ ಸಮಿತಿಯಲ್ಲಿ ಇರುವ ಓರ್ವ ವ್ಯಕ್ತಿ ಎನ್ನುವ ವಿಚಾರ ತಿಳಿಯಿತು ಎಂದು ಹೇಳಿದ್ದರು.

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ದಿಲೀಪ್ ವೆಂಗ್‍ಸರ್ಕಾರ್ ಅಂತವರು ಇರಬೇಕು. ಆಗ ಕ್ರೀಡಾ ಸುಧಾರಣೆಯನ್ನು ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು.

ಫಾರೂಖ್ ಇಂಜಿನಿಯರ್ ಹೇಳಿಕೆಯಿಂದ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅನುಷ್ಕಾ, ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯೆ ನೀಡದೆ ಯಾವಾಗಲೂ ಮೌನವಾಗಿರುವುದನ್ನು ಕಳೆದ 11 ವರ್ಷಗಳಿಂದ ನಾನು ರೂಢಿಸಿಕೊಂಡು ಬಂದಿದ್ದೇನೆ. ನಾನು ಮೌನ ನನ್ನ ದೌರ್ಬಲ್ಯವಲ್ಲ. ಆದರೆ ಈ ಬಾರಿ ನನ್ನ ಮೇಲೆ ಗಂಭೀರ ಆರೋಪ ಬಂದಿದೆ. ಇದರಿಂದಾಗಿ ಇಂತಹ ಸುದ್ದಿಗಳು ನನಗೆ ಮುಜುಗುರ ತರುವಂತೆ ಮಾಡುತ್ತಿವೆ. ಇದನ್ನು ಇವತ್ತಿಗೆ ಕೊನೆಗೊಳಿಸಬೇಕಿದೆ ಎಂದು ಪತ್ರದ ಮೂಲಕ ತಿಳಿಸಿದ್ದರು.

ನೀವು ಸಾಮಾನ್ಯವಾಗಿ ಹರುಡುವ ಸುದ್ದಿಗಳು ಅಪಾಯಕಾರಿ ಮತ್ತು ದುರುದ್ದೇಶಪೂರಿತವಾಗಿರುತ್ತದೆ ಎಂಬುದು ಗೊತ್ತಿರಲಿ. ಏಕೆಂದರೆ ಇನ್ನೊಬ್ಬರ ಪತ್ನಿಯಾಗಿರುವವಳು ಕೂಡ ಸ್ವತಂತ್ರ ಮಹಿಳೆಯಾಗಿರುತ್ತಾಳೆ ಎನ್ನುವುದು ತಿಳಿದಿರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಆಯ್ಕೆದಾರರು ತನಗೆ ಚಹಾ ವಿತರಿಸಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ, ಸ್ವಂತ ಖರ್ಚಿನಲ್ಲಿ ಪಂದ್ಯ ವೀಕ್ಷಿಸಲು ಹೋಗಿದ್ದೆ. ಫ್ಯಾಮಿಲಿ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ್ದೇನೆ. ನಿಮಗೆ ದಾಖಲೆ ಬೇಕಿದ್ದರೆ ಕೊಡುತ್ತೇನೆ ಎಂದು ಗುಡುಗಿದ್ದರು. ಅಷ್ಟೇ ಅಲ್ಲದೇ ಕೊನೆಯಲ್ಲಿ ನಾನು ಚಹಾ ಕುಡಿಯುವುದಿಲ್ಲ, ಕಾಫಿ ಕುಡಿಯುತ್ತೇನೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ ಎಂದು ಫಾರೂಖ್ ಇಂಜಿನಿಯರ್ ಅವರಿಗೆ ಟಾಂಗ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *