ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅರೆಸ್ಟ್‌, ಬಿಡುಗಡೆ

Public TV
2 Min Read

ಚಂಡೀಗಢ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‍ರನ್ನು ಬಂಧಿಸಿ ಬಳಿಕ ಕೋರ್ಟ್ ನೀಡಿದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇನ್‌ಸ್ಟಾಗ್ರಾಮ್‌ ಲೈವ್ ಚಾಟ್‍ನಲ್ಲಿ ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಯುವರಾಜ್ ಕ್ಷಮೆ ಕೇಳಿದ್ದರು. ಆದರೆ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು.

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್‍ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ದೂರುದಾರ ರಜತ್‌ ಕಾಲ್ಸನ್‌, ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿ ದಾಖಲಾದ ಪ್ರಕರಣಕ್ಕೆ ಜಾಮೀನು ನೀಡಿದ್ದರಿಂದ ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸಮುದಾಯಕ್ಕೆ ಅವಮಾನ ಮಾಡಿದ್ದರಿಂದ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.

ಏನಿದು ಪ್ರಕರಣ?
2020ರ ಜೂನ್‌ ತಿಂಗಳಿನಲ್ಲಿ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಹಲ್ ಅವರನ್ನು ʼಭಂಗಿʼ ಎಂದು ಕರೆದಿದ್ದರು. ಈ ವಿಚಾರಕ್ಕೆ ವಕೀಲ ರಜತ್‌ ಕಾಲ್ಸನ್‌ ದೂರು ನೀಡಿದ್ದರು. ಆದರೆ 8 ತಿಂಗಳ ಬಳಿಕ ಹಿಸ್ಸಾರ್‌ ಜಿಲ್ಲೆಯ ಹಂಸಿ ಠಾಣೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

ರೋಹಿತ್‌ ಶರ್ಮಾ ಜೊತೆಗಿನ ಸಂವಾದಲ್ಲಿ ಕುಲದೀಪ್‌ ಮತ್ತು ಯಜುವೇಂದ್ರ ಚಾಹಲ್‌ ಇದ್ದರು. ಮಾತುಕತೆಯ ವೇಳೆ ಯುವರಾಜ್‌ ಚಹಲ್‌ ಅವರನ್ನು ಭಂಗಿ ಎಂದು ಕರೆದಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು.

ವಿವಾದ ಜಾಸ್ತಿ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಯುವರಾಜ್‌ ಸಿಂಗ್‌, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನರ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು.

ಸ್ನೇಹಿತರ ಜೊತೆಗಿನ ಸಂವಾದದ ವೇಳೆ ಅನಗತ್ಯವಾಗಿ ಅಪಾರ್ಥವಾಗಿದೆ. ನಾನು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿಲ್ಲ. ನನ್ನ ಮಾತುಗಳಿಂದ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

ʼಭಂಗಿʼ ಪದವನ್ನು ಉತ್ತರ ಭಾರತದ ಕಡೆ ಜಾತಿ ಸೂಚಕ ಪದವನ್ನಾಗಿ ಬಳಸಲಾಗುತ್ತದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ದೂರು ನೀಡಿದ್ದರು. ಐಪಿಸಿ ಸೆಕ್ಷನ್‌ 153, 153ಎ, 295, 505 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕೇಸ್‌ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *