KPSC ಅಪಾರದರ್ಶಕ ಆಡಳಿತದ ಬಗ್ಗೆ ಸುರೇಶ್ ಕುಮಾರ್ ತೀವ್ರ ಪ್ರತಿರೋಧ

Public TV
1 Min Read

ಬೆಂಗಳೂರು: ಆಡಳಿತ ಯಂತ್ರದ ಸಮರ್ಪಕ ನಿರ್ವಹಣೆಗೆ ದಕ್ಷ, ಸಮರ್ಥ ಮಾನವ ಸಂಪನ್ಮೂಲದ ನಿರಂತರ ಪೂರೈಕೆ ಮಾಡಬೇಕಿರುವ ಕರ್ನಾಟಕ ಲೋಕ ಸೇವಾ ಆಯೋಗ (KPSC) ಸಂಸ್ಥೆ ತನ್ನ ನಿಷ್ಕ್ರಿಯ ಆಡಳಿತದ ಮೂಲಕ, ಸರ್ಕಾರಿ ವ್ಯವಸ್ಥೆಯ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮದ ಬಗ್ಗೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಸ್ಥೆಯ ಬಾಗಿಲು ತಟ್ಟಿ ಮಾಹಿತಿ ಆಗ್ರಹಿಸುವ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮೇ 31ರ ಮಂಗಳವಾರ ಬೆಳಗ್ಗೆ 10ಕ್ಕೆ ಕೆಪಿಎಸ್‍ಸಿ ಕಚೇರಿಯ ಬಾಗಿಲು ತಟ್ಟಲಿರುವ ಸುರೇಶ್ ಕುಮಾರ್, ಆ ಮೂಲಕ ಸಾರ್ವಜನಿಕ ಸೇವಾಕಾಂಕ್ಷಿಗಳಾದ ಅಸಂಖ್ಯ ಪ್ರತಿಭಾವಂತ ಯುವಕರ ಆಕಾಂಕ್ಷೆಗಳಿಗೆ ದನಿಯಾಗಲಿದ್ದಾರೆ. 2021ರ ಫೆಬ್ರುವರಿಯಲ್ಲಿ ನಡೆದ ಕೆ.ಎ.ಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ. ತಾವು ಸಚಿವರಾಗಿದ್ದ ಸಂದರ್ಭದಲ್ಲಿಯೂ ಹಲವು ಉದ್ಯೋಗಾಂಕ್ಷಿಗಳಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದು, ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ ನಿರ್ವಹಣೆಗೆ ಪ್ರತಿಕೂಲವಾಗಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತಾರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್

ಕೇಂದ್ರ ಲೋಕ ಸೇವಾ ಆಯೋಗ (UPSC) ಮಾದರಿಯಲ್ಲಿ ಸಂಸ್ಥೆ ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ಏಕೆ ಸಾಧ್ಯವಿಲ್ಲ? ಕೆಪಿಎಸ್‍ಸಿ ಕಳೆದ ಹಲವು ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳೆಷ್ಟು? ಎಷ್ಟು ಫಲಿತಾಂಶ ನೀಡಲಾಗಿದೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ? ವಿಳಂಬ ಧೋರಣೆಗೆ ಕಾರಣ ಏನು? ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕ್ರಿಯಾಯೋಜನೆ ಏನು? ಎನ್ನುವ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಕೆ.ಪಿ.ಎಸ್.ಸಿ ಬಾಗಿಲ ಮುಂದೆ ನಿಲ್ಲಲಿದ್ದೇನೆ. ಸಂಸ್ಥೆಯ ಬಾಗಿಲು ತಟ್ಟುವ ಮೂಲಕ ಮಾಹಿತಿ ಒದಗಿಸಲು ಆಗ್ರಹಿಸುತ್ತೇನೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *