ಸಿದ್ದರಾಮಯ್ಯಗೋಸ್ಕರ ಕಾಂಗ್ರೆಸ್ ಪಕ್ಷವಿಲ್ಲ, ಪಕ್ಷಕ್ಕಾಗಿ ನಾವಿದ್ದೇವೆ: ಮಾಜಿ ಡಿಸಿಎಂ

Public TV
1 Min Read

– ಸಿದ್ದರಾಮಯ್ಯ ಅವರೇ ನಮ್ಮ ನಾಯಕರು

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.

ಉಪಚುನಾವಣೆಯ ಸಂಬಂಧ ಪಕ್ಷದ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ನಡೆದ ಸಭೆಗೆ ಗೈರಾಗಿದ್ದ ಕುರಿತು ಇಂದು ಮಾಧ್ಯಮಗಳಿಗೆ ಪರಮೇಶ್ವರ್ ಅವರ ಸ್ಪಷ್ಟನೆ ನೀಡಿದರು. ಗುರುವಾರ ನಡೆದ ಸಭೆಯನ್ನು ಮೊದಲು 11:30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಪಕ್ಷದ ಕಾರ್ಯಾಧ್ಯಕ್ಷರು ತುರ್ತಾಗಿ ಹೋಗ ಬೇಕಿದ್ದ ಕಾರಣ ಸಭೆಯನ್ನು ಬೆಳಗ್ಗೆ 9:30ಕ್ಕೆ ಆರಂಭ ಮಾಡಿದ್ದರು. ನಾನು ಚಿಕ್ಕಮಗಳೂರಿನಲ್ಲಿ ಇದ್ದ ಕಾರಣ ಸಭೆಗೆ ಆಗಮಿಸಲು ತಡವಾಗುತ್ತದೆ ಎಂದು ಮೊದಲೇ ಹೇಳಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಇದಕ್ಕೂ ಮುನ್ನ ನಡೆದಿದ್ದ ಬೆಳಗಾವಿ ಪ್ರತಿಭಟನೆಗೆ ಆಗಮಿಸುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅಲ್ಲದೇ ನಿನ್ನೆಯ ಸಭೆಯಲ್ಲಿ ಗಂಭೀರ ವಿಚಾರಗಳು ಚರ್ಚೆಯಾಗಿರುವ ಕುರಿತು ಕೇಳಿದ್ದೇನೆ. ಆದರೆ ಸಿದ್ದರಾಮಯ್ಯರಗೋಸ್ಕರ ನಾವೇನಿಲ್ಲ, ಸಿದ್ದರಾಮಯ್ಯರಗೋಸ್ಕರ ಕಾಂಗ್ರೆಸ್ ಪಕ್ಷವೂ ಇಲ್ಲ ಅಥವಾ ನನಗೋಸ್ಕರ ಕಾಂಗ್ರೆಸ್ ಪಕ್ಷ ಇಲ್ಲ, ಕಾಂಗ್ರೆಸ್ ಪಕ್ಷಕಾಗಿ ನಾವಿದ್ದೇವೆ ಎಂದರು.

ಸಭೆಯಲ್ಲಿ ಕೆಲ ವೈಯಕ್ತಿಕ ಪ್ರತಿಷ್ಠೆಗಾಗಿ ಮಾತಿಗೆ ಮಾತು ನಡೆದಿರಬಹುದು ಅಷ್ಟೇ. ನಾನೂ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ನೂರಾರು ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ, ಹರಿಪ್ರಸಾದ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಸಭೆಯಲ್ಲಿದ್ದರು. ಯಾವ ಹಿರಿಯ ನಾಯಕರೂ ಆ ರೀತಿ ನಡೆದುಕೊಂಡಿಲ್ಲ. ಮುನಿಯಪ್ಪರ ಚುನಾವಣಾ ಸೋಲಿಗೆ ಕಾರಣ ಗೊತ್ತಿಲ್ಲ. ಒಂದೊಮ್ಮೆ ಅವರು ಸಭೆಯಲ್ಲಿ ಕೆಪಿಸಿಸಿಗೆ ದೂರು ನೀಡಿದರೆ ಪಕ್ಷದ ಅಧ್ಯಕ್ಷರು ವರದಿ ಮಾಡಿ ಕ್ರಮಕೈಗೊಳ್ಳುತ್ತಾರೆ.

ನಮ್ಮಲ್ಲಿ ವಲಸೆ ಅಥವಾ ಮೂಲ ಕಾಂಗ್ರೆಸ್ ಎಂಬ ಭಾಗ ಇಲ್ಲ, ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದೆ. ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರೇ. ಅವರು ವಲಸೆ ಬಂದರೂ ಅವರು ವಿರೋಧ ಪಕ್ಷದ ನಾಯಕ ಸ್ಥಾನ, ಸಿಎಂ ಆಗಿದ್ದರು. ನನ್ನ ಮೃದು ಧೋರಣೆಯಿಂದಲೇ ನನಗೆ ಹಿನ್ನಡೆಯಾಗುತ್ತಿದೆ ಎಂಬುವುದು ಸುಳ್ಳು, ಮೃದು ಧೋರಣೆಯಿಂದಲೇ ನಾನು ಉಪಮುಖ್ಯಮಂತ್ರಿಯಾಗಿದ್ದೇನೆ. ಲೋಕಸಭಾ ಚುನಾವಣೆ ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ವಹಿಸಿಕೊಳ್ಳುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *