ನಾನು ಯಾರನ್ನೂ ದ್ವೇಷ ಮಾಡಿಲ್ಲ, ನನ್ನಿಂದ ನೋವಾಗಿದ್ರೆ ಮರೆತುಬಿಡಿ, ಕ್ಷಮಿಸಿಬಿಡಿ: ಎಸ್‍ಎಂಕೆ

Public TV
1 Min Read

ಬೆಂಗಳೂರು: ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಕೃಷ್ಣಪಥ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಕೃಷ್ಣಪಥ ಸಮಿತಿಯಿಂದ ಹೊರತಂದಿರುವ 6 ಗ್ರಂಥಗಳನ್ನ ಲೋಕಾರ್ಪಣೆ ಮಾಡಲಾಯಿತು.

ಕೃಷ್ಣ ಪಥ, ಚಿತ್ರ ದೀಪ ಸಾಲು, ಸ್ಮೃತಿವಾಹಿನಿ, ಭವಿಷ್ಯ ದರ್ಶನ, ಸ್ಟೇಟ್ಸ್ ಮ್ಯಾನ್ ಎಸ್.ಎಂ. ಕೃಷ್ಣ ಸೇರಿದಂತೆ 6 ಗ್ರಂಥಗಳು ಬಿಡುಗಡೆಯಾದವು. ಜಾನಪದ ಶೈಲಿಯಲ್ಲಿ ಸೋಬಾನೆ ಪದದೊಂದಿಗೆ ಬುಟ್ಟಿಯಲ್ಲಿದ್ದ ಗ್ರಂಥಗಳನ್ನ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್ ಗ್ರಂಥಗಳನ್ನ ಬಿಡುಗಡೆ ಮಾಡಿದರು.

ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಎಸ್ ಎಂಕೆ ನಡೆದು ಬಂದ ಕೃಷ್ಣಪಥದ ಬಗ್ಗೆ ಮೆಲಕು ಹಾಕಲಾಯಿತು. ಇದೇ ವೇಳೆ ಎಸ್‍ಎಂಕೆ ಕೂಡ ತಮ್ಮ ಹಾದಿಯನ್ನು ಚುಟುಕಾಗಿ ಮೆಲಕು ಹಾಕಿದರು. ತಂದೆ ಮಲ್ಲಯ್ಯನವರಿಂದ ಬಂದ ಸಂಸ್ಕಾರ, ಆದರ್ಶಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡಿದರು. ಜೊತೆಗೆ ಎಸ್ ಎಂಕೆ ರಾಜಕೀಯ ದಿಕ್ಕನ್ನು ಬದಲಾಯಿಸಿದ ವೀರಣ್ಣಗೌಡರನ್ನು ಸೋಲಿಸಿದ ಚುನಾವಣೆಯನ್ನು ಮೆಲಕು ಹಾಕಿದರು. ಕಾಡುಗಳ್ಳ ವೀರಪ್ಪನ್ ನಿಂದ ಡಾ.ರಾಜಕುಮಾರ್ ಅಪಹರಣ ಪ್ರಕರಣವನ್ನು ಸ್ಮೃತಿಪಟಲದ ಮುಂದೆ ತಂದರು. ಇದನ್ನು ಓದಿ: ಎಸ್. ಎಂ.ಕೃಷ್ಣ ಹಿಂದೆ ರೂಪವತಿಯರ ಕ್ಯೂ

ಹೀಗೆ ಮೆಲಕು ಹಾಕುವಾಗ ಎಸ್‍ಎಂಕೆ ಕ್ಷಮೆ ಕೇಳಿದ್ದು ವಿಶೇಷವಾಗಿತ್ತು. ನಾನು ಯಾರ ಬಗ್ಗೆಯೂ ದ್ವೇಷ ಸಾಧಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಇದಕ್ಕೆ ಕಾರಣ ನನ್ನ ತಂದೆ ಬೋಧಿಸಿದ ಮೌಲ್ಯಗಳು. ನನ್ನ ತಂದೆ ಬೋಧಿಸಿದ ಮೌಲ್ಯಗಳು ನನ್ನನ್ನ ಆ ಕಡೆ ಈ ಕಡೆ ಕರೆದುಕೊಂಡು ಹೋಗಲಿಲ್ಲ. ಅಪ್ಪಿತಪ್ಪಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಮರೆತುಬಿಡಿ, ಕ್ಷಮಿಸಿಬಿಡಿ. ಪರಸ್ಪರ ನಿಂದನೆಯನ್ನ ನಿಲ್ಲಿಸಿಬಿಡಿ, ಮುಂದೆ ಸಾಗೋಣ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *