ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

Public TV
2 Min Read

ಬೆಂಗಳೂರು: ಇವತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣನ 189ನೇ ಪುಣ್ಯ ಸ್ಮರಣೆ. ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ರಾಜಕೀಯ ನಾಯಕರುಗಳು ಮಾಲಾರ್ಪಣೆ ಮಾಡಿದರು. ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ 11ಕ್ಕೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಯಣ್ಣನ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಸಿಎಂ, ಆನಂದ್ ರಾವ್ ಮೇಲ್ಸೇತುವೆಗೆ ಸದ್ಯದಲ್ಲೇ ಸಂಗೊಳ್ಳಿ ರಾಯಣ್ಣನ ಹೆಸರನ್ನು ನಾಮಕರಣ ಮಾಡುವುದಾಗಿ ಘೋಷಿಸಿದರು.

ಯಡಿಯೂರಪ್ಪ ತೆರಳಿದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆಗಮಿಸಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾರ ಹಾಕಿ ರಾಯಣ್ಣನ ಶೌರ್ಯ, ಸಾಹಸಗಳನ್ನು ಸ್ಮರಿಸಿಕೊಂಡರು. ಈ ವೇಳೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳವಾದ ಸಂಗೊಳ್ಳಿ ಮತ್ತು ನೇಣು ಹಾಕಿದ ಸ್ಥಳವಾದ ನಂದಗಡಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿರುವುದಾಗಿ ತಿಳಿಸಿದರು.

ನಮ್ಮ ಸರ್ಕಾರ ಇದ್ದಾಗ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಂಬಂಧ 267 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೆವು. ಆದರೆ ಈವರೆಗೆ ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲು ಹೇಳಿದ್ದೆ. ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡದಿದ್ದರೆ ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಮುಖ್ಯಮಂತ್ರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಯಣ್ಣ, ಚೆನ್ನಮ್ಮ ಹೆಸರಿಡಿ: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡಬೇಕು ಎಂಬುದು ನಮ್ಮ ಆಗ್ರಹ. ಇದಕ್ಕೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ರಾಜ್ಯ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಈ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಹೌದು ಹುಲಿಯಾ ಘೋಷಣೆ: ಸಂಗೊಳ್ಳಿ ರಾಯಣ್ಣರ 189ನೇ ಪುಣ್ಯಸ್ಮರಣೆ ಪ್ರಯುಕ್ತ ಆನಂದ್ ರಾವ್ ವೃತ್ತದ ಬಳಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಿದ್ದರಾಮಯ್ಯ ಆಗಮಿಸುತ್ತಿದ್ದ ಹಾಗೇ ಅಭಿಮಾನಿಗಳು “ಹೌದು ಹುಲಿಯಾ ಹೌದು ಹುಲಿಯಾ” ಎಂದು ಕೂಗಲು ಪ್ರಾರಂಭಿಸಿದರು. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅಭಿಮಾನಿಗಳಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತು. ಭಾಷಣ ಆರಂಭಿಸುತ್ತಿದ್ದ ಹಾಗೇ ಅಭಿಮಾನಿಗಳು ಹೌದು ಹುಲಿಯಾ ಎಂದು ಘೋಷಣೆ ಕೂಗಿ ಜೈಕಾರ ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *