ನಾನು ವಿಪಕ್ಷ ನಾಯಕನೆಂದ ಮಾಜಿ ಸಿಎಂ – ಮೇಜು ಕುಟ್ಟಿ ಬಿಜೆಪಿ ಸದಸ್ಯರಿಂದ ಹರ್ಷ

Public TV
2 Min Read

ಬೆಂಗಳೂರು: ವಿಶ್ವಾಸ ಮತಯಾಚನೆಯ ಕುರಿತ ಚರ್ಚೆಯ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರ ಮಾತಿಗೆ ಬಿಜೆಪಿ ಶಾಸಕರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದ ಪ್ರಸಂಗ ಇಂದು ನಡೆಯಿತು.

ವಿಧಾನಸೌಧದಲ್ಲಿ ಸಿಎಂ ವಿಶ್ವಾಸ ಮತಯಾಚನೆಯ ಪ್ರಸ್ತಾಪವನ್ನು ಮಂಡಿಸಿ ತನ್ನ ಮಾತನ್ನು ಆರಂಭಿಸಿದರು. ಈ ವೇಳೆ ಮಧ್ಯದಲ್ಲಿ ಸಿಎಂ ಭಾಷಣವನ್ನು ತಡೆದು ಸಿದ್ದರಾಮಯ್ಯ ಎದ್ದು ನಿಂತು ಮಾತನಾಡಲು ಶುರುಮಾಡಿದರು.

ಕೆಲವು ಸ್ಪಷ್ಟೀಕರಣ ಕೊಡಲು ಇಚ್ಚಿಸಿದ್ದೇನೆ. ವಿಶ್ವಾಸ ಮತಯಾಚನೆಗೆ ಅಡ್ಡಿ ಮಾಡಬೇಕು ಎಂದು ಈ ಪ್ರಶ್ನೆ ಮಾಡುತ್ತಿಲ್ಲ. ಆದರೆ ಕೆಲವೊಂದು ಸ್ಪಷ್ಟೀಕರಣಗಳು ಈ ಸದನಕ್ಕೆ ಬೇಕು ಎಂದು ಹೇಳಿ ಸಿದ್ದರಾಮಯ್ಯ ಮಾತನಾಡಲು ಆರಂಭಿಸಿದರು.

ಪ್ರತಿ ಪಕ್ಷದವರ ಆಕ್ಷೇಪದ ನಡುವೆಯೂ ಸಿದ್ದರಾಮಯ್ಯಗೆ ಮಾತನಾಡಲು ಸ್ಪೀಕರ್ ರಮೇಶ್ ಕುಮಾರ್ ಅವಕಾಶ ಕೊಟ್ಟರು. ಆಗ ಸಿದ್ದರಾಮಯ್ಯ ಸದನದಲ್ಲಿ ವಿಪ್ ಬಗ್ಗೆ ಪ್ರಸ್ತಾಪಿಸಿ, ವಿಪ್ ಕೊಡುವ ಅಧಿಕಾರ ಸಂವಿಧಾನ ಬದ್ಧವಾಗಿರುತ್ತದೆ. ವಿಪ್ ಕೊಟ್ಟಿದ್ದರೂ ಕೂಡ ಸದನಕ್ಕೆ ಕೆಲ ಸದಸ್ಯರು ಹಾಜರಾಗಿಲ್ಲ. i am leader of opposition (ಸದನದಲ್ಲಿ ನಾನು ಪ್ರತಿಪಕ್ಷ ನಾಯಕ) ಎಂದು ಸಿದ್ದರಾಮಯ್ಯ ಬಾಯಿತಪ್ಪಿ ಹೇಳಿದರು.

ಮೌನವಾಗಿ ಭಾಷಣ ಕೇಳುತ್ತಿದ್ದ ಬಿಜೆಪಿ ಸದಸ್ಯರು ಸಿದ್ದರಾಮಯ್ಯನವರ ಬಾಯಿಯಿಂದ ಈ ಮಾತು ಹೊರಬಂದ ಕೂಡಲೇ ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಬಿಜೆಪಿಯವರ ವರ್ತನೆ ಗಮನಿಸಿದ ಸಿದ್ದರಾಮಯ್ಯ, ನಾನು ನಾಲ್ಕು ವರ್ಷ ಲೀಡರ್ ಆಫ್ ಆಪೋಸಿಷನ್ ಆಗಿದ್ದೆ. ಏನೋ ಈಗ ಬಾಯಿ ತಪ್ಪಿ ಮಾತನಾಡಿದೆ. ಈಗ ಏನ್ ಖುಷಿ ಆಯಿತೋ ಇವರಿಗೆ, ಸಿಎಂ ಹೇಳಿದಂತೆ ಏನ್ ಆತುರ ಇದೆ ಎಂದು ಹೇಳಿ ತಿರುಗೇಟು ನೀಡಿದರು.

ಹಿಂದೆ ಒಂದೇ ದಿನದಲ್ಲಿ ಮೂರು ಪಕ್ಷಕ್ಕೆ ಹರಿಯಾಣದ ಗಯಾಲಾಲ್ ಎಂಬವರು ಪಕ್ಷಾಂತರ ಮಾಡಿದರು. ಆಗ ಇಡೀ ಪಾರ್ಲಿಮೆಂಟ್‍ನಲ್ಲಿ ಪಕ್ಷಾಂತರದ ಬಗ್ಗೆ ಚರ್ಚೆಯಾಗುತ್ತೆ. ಪಕ್ಷಾಂತರದ ಪಿಡುಗು ಇಡೀ ಪ್ರಜಾಪ್ರಭುತ್ವವನ್ನು ಅಲ್ಲಾಡಿಸುತ್ತೆ. ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧೀಕರಣವಾಗಿ ಪಕ್ಷಾಂತರಕ್ಕೆ ಕಡಿವಾಣ ಹಾಕಬೇಕು ಎಂದು ಪಕ್ಷಾಂತರ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದರು.

ಹಿಂದೆಲ್ಲ ಪಕ್ಷಾಂತರ ಕಾಯ್ದೆ ಬಗ್ಗೆ ಅಷ್ಟೊಂದು ಚರ್ಚೆ ಆಗುತ್ತಿರಲಿಲ್ಲ. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1967 ರಲ್ಲಿ ಗಯಾಲಾಲ್ ಅನ್ನೋರು ಮೂರು ಸಲ ಪಕ್ಷಾಂತರ ಮಾಡಿದರು. ಆಗಿನಿಂದ ಇಡೀ ದೇಶ ಪಕ್ಷಾಂತರ ಕಾಯ್ದೆ ಬಗ್ಗೆ ಗಂಭೀರವಾಗಿ ಚರ್ಚೆ ಶುರು ಮಾಡಿತು ಎಂದರು. ಸಿದ್ದರಾಮಯ್ಯ ಭಾಷಣಕ್ಕೆ ಮಾಧುಸ್ವಾಮಿ ಅಡ್ಡಿ ಪಡಿಸಿ, ವಿಶ್ವಾಸ ಮತ ಮುಗಿದ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಸ್ಪೀಕರ್ ಮಧ್ಯೆ ಪ್ರವೇಶಿಸಿ ನಿಮಗೂ ಮಾತನಾಡಲು ಅವಕಾಶ ಕೊಡುತ್ತೇನೆ ಎಂದು ಹೇಳಿದರು. ಬಳಿಕ ಸಿದ್ದರಾಮಯ್ಯ ತಮ್ಮ ಮಾತನ್ನು ಮುಂದುವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *