56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಜನಾರ್ದನ ರೆಡ್ಡಿ ಅವರನ್ನು ಅಸ್ತ್ರವಾಗಿಟ್ಟುಕೊಂಡ ಸಿದ್ದರಾಮಯ್ಯ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ವಿರುದ್ಧ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

ಬಲಿಷ್ಠ ಪಕ್ಷ, ಸಮರ್ಥ ಪ್ರಧಾನಿ, 56 ಇಂಚಿನ ಎದೆ ಇವೆಲ್ಲ ಸರಿ, ಇಂತಹ ಬಿಜೆಪಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ? ಈ ಅನೈತಿಕ ಸಂಬಂಧದ ಹಿಂದಿನ ಗುಟ್ಟೇನು ಎಂದು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆ ಎಸೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನಮ್ಮನ್ನು ಶೇ.10 ಕಮಿಷನ್ ಸರ್ಕಾರ ಎಂದು ಗೇಲಿ ಮಾಡಿದ್ದರು. ಈಗ ನಾನು ಕೇಳುತ್ತೇನೆ, ಈ ಗಣಿಲೂಟಿಕೋರರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲು ನೀವು ಪಡೆದಿರುವ ಕಮಿಷನ್ ಎಷ್ಟು ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣಾ ಕಾಲದಲ್ಲಿ ಹೇಳಿದ್ದೇನು? ನಾ ಕಾವೊಂಗಾ, ನ ಕಾನೇದೂಂಗಾ ಎಂದಿದ್ದರು. ಹಾಗಿದ್ದರೆ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯವರನ್ನು ಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ? ಅವರನ್ನು ತಿನ್ನಲು ಯಾಕೆ ಬಿಟ್ಟಿದ್ದೀರಿ? ಯಾರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಜನಾರ್ದನ ರೆಡ್ಡಿ ಪಕ್ಷದ ಪ್ರಚಾರ ಮಾಡಬಾರದೆಂದು ಅಮಿತ್ ಶಾ ಆದೇಶ ನೀಡುತ್ತಾರೆ. ರೆಡ್ಡಿ ಅದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಹಾಗಿದ್ದರೂ ಮೋದಿ ಅವರಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರವರೆಗೆ ಯಾರೂ ಕೂಡಾ ರೆಡ್ಡಿ ವಿರುದ್ಧ ಮಾತನಾಡುವುದಿಲ್ಲ, ಯಾಕೆ ರೆಡ್ಡಿ ಜತೆ ಇವರಿಗೆಲ್ಲ ಏನು ಸಂಬಂಧ ಎಂದು ಪ್ರಶ್ನಿಸಿ ಕುಟುಕಿದ್ದಾರೆ.

ಶ್ರೀರಾಮುಲು ರೆಡ್ಡಿ ಕೈ ಗೊಂಬೆ:
ಶಾಸಕ ಶ್ರೀರಾಮುಲು ಒಬ್ಬ ಹುಂಬ ಮನುಷ್ಯ. ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕಿತ್ತು. ಈಗ ರೆಡ್ಡಿ ಸೋದರರು ಶ್ರೀರಾಮುಲು ಅವರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಆಡಿಸಿದಂತೆ ಶ್ರೀರಾಮುಲು ಆಡುತ್ತಿದ್ದಾರೆ. ರೆಡ್ಡಿ ಸಹೋದರರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ. ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಬಿಸಿಲ ನಾಡು ಬಳ್ಳಾರಿಯ ಜನ ಕಷ್ಟಜೀವಿಗಳು, ಸ್ವಾಭಿಮಾನಿಗಳು. ಇಂತಹ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಚಲಾಯಿಸುವ ಪ್ರತಿಯೊಂದು ಮತವೂ ಗಣಿ ಲೂಟಿ ಮಾಡಿ, ಬಳ್ಳಾರಿಯನ್ನು ನರಕಮಾಡಿ ಜೈಲಿಗೆ ಹೋಗಿ ಬಂದು, ಈಗ ಗಡಿಪಾರಾಗಿರುವ ಜನಾರ್ದನ ರೆಡ್ಡಿಯ ವಿರುದ್ಧದ ಮತ ಎಂದು ಮತದಾರರು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಈ ಉಪ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗದಿದ್ದರೂ, ಜನರ ಭಾವನೆಗಳು ಯಾವ ಕಡೆಗಿದೆ ಎಂಬುದನ್ನು ಖಂಡಿತವಾಗಿ ತೋರಿಸುತ್ತದೆ. ಬಳ್ಳಾರಿಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂಬ ಸಂಪೂರ್ಣ ಭರವಸೆ ನನಗಿದೆ. ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಅಂತ ಭರವಸೆ ವ್ಯಕ್ತಪಡಿಸಿದರು.

ಬಳ್ಳಾರಿಯ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಬರಬೇಕಾಗಿದ್ದ ಅಚ್ಚೇ ದಿನ್ ಅಂಬಾನಿ, ಅದಾನಿಗಳಿಗೆ ಬಂದಿದೆ. ಈ ಬಗ್ಗೆ ಉತ್ತರಿಸಬೇಕಿದ್ದ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *