ಸಂವಿಧಾನ ರದ್ದು ಮಾಡಲು ಬಿಜೆಪಿ ಕೈ ಹಾಕಿದ್ರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತೆ: ಸಿದ್ದರಾಮಯ್ಯ

Public TV
2 Min Read

ವಿಜಯಪುರ: ಸಂವಿಧಾನ ರದ್ದು ಮಾಡಲು ಬಿಜೆಪಿಯವರು ಏನಾದರೂ ಕೈ ಹಾಕಿದರೆ ಈ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಯನ್ನು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಈ ರೀತಿಯ ಹೋರಾಟಗಳು ನಡೆಯುತ್ತಿದ್ದವು. ಭಾರತೀಯ ಪೌರತ್ವ ಕಾಯ್ದೆಗೆ ತಿದ್ದುಪಡಿಯಾದಾಗಿನಿಂದ ದೇಶಾದ್ಯಂತ ಜನ ಸಿಡಿದೆದ್ದಿದ್ದಾರೆ. ಜನರು ಸಾಮೂಹಿಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ನೋಡಿದರೆ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಹೀಗಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸರ್ಕಾರಕ್ಕೆ ಎಷ್ಟೇ ಬಹುಮತವಿರಲಿ. ಸಂವಿಧಾನ ಬಾಹಿರ ಕಾನೂನು ಮಾಡಿದರೆ ಸಾರ್ವಜನಿಕರು ಹೋರಾಟ ಮಾಡುವ ಹಕ್ಕನ್ನು ಅಂಬೇಡ್ಕರ್ ನೀಡಿದ್ದಾರೆ. ಈ ಹಕ್ಕನ್ನು ದಮನ ಮಾಡಲು ಮೋದಿ, ಶಾಗೆ ಯಾವುದೇ ಅಧಿಕಾರವಿಲ್ಲ ಎಂದರು.

ವಿಶ್ವ ಶ್ರೇಷ್ಠ ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಈ ಸಂವಿಧಾನದ ಮೂಲಕ ಕಲ್ಪಿಸಲಾಗಿರುವ ಸಮಾನತೆಯ ವಿರುದ್ಧ ಬಿಜೆಪಿಗೆ ಸಿಟ್ಟಿದೆ. ಒಂದು ವೇಳೆ ಸಂವಿಧಾನ ರದ್ದು ಮಾಡಲು ಬಿಜೆಪಿ ಕೈ ಹಾಕಿದರೆ ದೇಶದಲ್ಲಿ ರಕ್ತಕ್ರಾಂತಿ ನಡೆಯಲಿದೆ. ವಾಜಪೇಯಿ ಪ್ರಧಾನಿಯಾಗಿದ್ದರೂ ಹಿಡನ್ ಅಜೆಂಡಾ ಜಾರಿ ಮಾಡಲಿಲ್ಲ. ಆದರೆ ಇಂದು ಮೋದಿ, ಶಾ ಹಿಡನ್ ಅಜೆಂಡಾ ಜಾರಿ ಮೂಲಕ ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದಾರೆ. ಸಂವಿಧಾನ ಪರ ಮತ್ತು ವಿರೋಧಿಗಳ ನಡುವೆ ಈಗ ಹೋರಾಟ ನಡೆಯುತ್ತಿದೆ. ಬಿಜೆಪಿಯವರು ಪರಿವರ್ತನೆ ವಿರೋಧಿಗಳು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಶ್ರೀಮಂತರು, ಬಡವರ ಮಧ್ಯೆ ಅಂತರ ಹಾಗೆಯೇ ಮುಂದುವರಿಯಲಿ, ಧರ್ಮ ಸಂಘರ್ಷ ನಡೆಯಲಿ ಎಂಬುದು ಬಿಜೆಪಿಯವರ ಉದ್ದೇಶ. ಈ ಹಿನ್ನೆಲೆ ಈಗ ಹೋರಾಟ ನಡೆಯುತ್ತಿದೆ. ಬ್ರಿಟಿಷರ ವಿರುದ್ಧ ಭಾರತೀಯರಿಗೆ ಜಯ ಸಿಕ್ಕಂತೆ ಈ ಹೋರಾಟದಲ್ಲಿ ನಮಗೆ ಜಯ ಸಿಕ್ಕೆ ಸಿಗಲಿದೆ. ಇಲ್ಲಿ ಯಾರಿಗೂ ಮಾನವೀಯತೆ ಇಲ್ಲ. ಯಾರನ್ನಾದರೂ ಕೊಂದು ಹಾಕುತ್ತಾರೆ. ಮಂಗಳೂರಿನಲ್ಲಿ ಪೊಲೀಸರು ದುರುದ್ದೇಶದಿಂದ ಇಬ್ಬರು ಅಮಾಯಕ ಯುವಕರನ್ನು ಕೊಂದುಹಾಕಿದರು. ಇದು ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ನಡೆಯುತ್ತಿದೆ. ದೇಶದಲ್ಲಿ ಭಯದ ವಾತಾವರಣ ಸೃಷ್ಠಿಸಲಾಗುತ್ತಿದೆ. ಈವರೆಗೆ ದೇಶಾದ್ಯಂತ 100 ಜನ ಸಾವಿಗೀಡಾಗಿದ್ದಾರೆ. ಮೋದಿ ಸೇರಿದಂತೆ ಯಾರಿಂದಲೂ ಹೋರಾಟ ತಡೆಯಲು ಸಾಧ್ಯವಿಲ್ಲ. ಸಿಎಎ ವಿರೋಧಿಗಳು ನಗರ ನಕ್ಸಲ್, ದೇಶ ವಿರೋಧಿಗಳು ಎಂದು ಬಿಂಬಿಸುತ್ತೀರ ಎಂದು ಪ್ರಶ್ನೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *