ಬೆಂಗಳೂರು: ಪಕ್ಷದ ಶಾಸಕರನ್ನು ಹಿಡಿದಿಡಲು ಕಾಂಗ್ರೆಸ್ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.
ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಆದೇಶ ಹೊರಡಿಸಿ, ಪಕ್ಷದ ಎಲ್ಲ ಶಾಸಕರ ರೂಮ್‍ಗಳಿಗೆ ನಿನ್ನೆ ಸಿದ್ದರಾಮಯ್ಯ ಆದೇಶದಂತೆ ನೋಟಿಸ್ ಅಂಟಿಸಲಾಗಿತ್ತು. ಅಷ್ಟೇ ಅಲ್ಲದೇ ಪಕ್ಷದ ಸಚೇತಕ ಗಣೇಶ್ ಹುಕ್ಕೇರಿ ಅವರು ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದರು.
ಅತೃಪ್ತರು ಈ ವಿಪ್‍ಗೆ ಕ್ಯಾರೇ ಅನ್ನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಈಗ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಫೆ.6 ರಿಂದ ಫೆ.15ರ ವರೆಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಕಡ್ಡಾಯವಾಗಿ ಎಲ್ಲ ಶಾಸಕರು ಹಾಜರಿರಬೇಕೆಂದು ಕಟ್ಟು ನಿಟ್ಟಿನ ಸೂಚನೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಚೇರಿಯಿಂದ ಖುದ್ದಾಗಿ ಶಾಸಕರ ಕೈಗೆ ವಿಪ್ ನೀಡಿ ಸಿಬ್ಬಂದಿ ಸಹಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಅಧಿವೇಶನದ ಮೊದಲ ದಿನವೇ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದು, ಸದನದಲ್ಲಿ ಚರ್ಚೆಗೆ ಕಾರಣವಾಯಿತು. ಈಗಲ್ ಟನ್ ರೆಸಾರ್ಟಿನಲ್ಲಿ ಹಲ್ಲೆಗೆ ಒಳಗಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಕಪ್ಪು ಬಣ್ಣದ ಗ್ಲಾಸ್ ಹಾಕಿ ಕಲಾಪಕ್ಕೆ ಹಾಜರಾಗಿದ್ದಾರೆ.
ಗೈರಾದ ಶಾಸಕರು ಯಾರು?:
ಕಾಂಗ್ರೆಸ್‍ನ ಒಟ್ಟು 9 ಜನ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್), ಉಮೇಶ್ ಜಾಧವ್ (ಚಿಂಚೋಳಿ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಗಣೇಶ್ (ಕಂಪ್ಲಿ), ಮಹೇಶ್ ಕುಮಟಳ್ಳಿ (ಅಥಣಿ), ಸುಧಾಕರ್ (ಚಿಕ್ಕಬಳ್ಳಾಪುರ), ಎಸ್.ರಾಮಪ್ಪ (ಹರಿಹರ) ಹಾಗೂ ಸೌಮ್ಯಾ ರೆಡ್ಡಿ (ಜಯನಗರ) ಅವರು ಸದನಕ್ಕೆ ಗೈರಾಗಿದ್ದಾರೆ.
ಜೆಡಿಎಸ್‍ನ ನಾರಾಯಣಗೌಡ (ಕೆ.ಆರ್.ಪೇಟೆ) ಪಕ್ಷೇತರ ಶಾಸಕರಾದ ಶಂಕರ್ (ರಾಣೇಬೆನ್ನೂರು) ಹಾಗೂ ನಾಗೇಶ್ (ಮುಳಬಾಗಿಲು) ಮೊದಲ ದಿನದ ಸದನಕ್ಕೆ ಹಾಜರಾಗಿಲ್ಲ. ಇತ್ತ ಬಿಜೆಪಿ 104 ಶಾಸಕರಲ್ಲಿ ನಾಲ್ವರು ಗೈರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕ ಲಿಂಗಣ್ಣ (ಮಾಯಕೊಂಡ), ಅತೃಪ್ತ ಕಾಂಗ್ರೆಸ್ ಶಾಸಕರ ಕಾವಲಿಗೆ ನಿಂತಿರುವ ಅಶ್ವತ್ಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹಾದೇವಪುರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಕೂಡ ಸದನಕ್ಕೆ ಹಾಜರಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv