ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

Public TV
3 Min Read

ಬೆಂಗಳೂರು: ರಾಜ್ಯ ರಾಜಕೀಯ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆಪರೇಷನ್ ಕಮಲ, ಕಾಂಗ್ರೆಸ್ ಒಳ ಬೇಗುದಿಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಶಾಸಕರೊಂದಿಗೆ ಸಂಧಾನ ಮಾತುಕತೆ ನಡೆಸಿದ್ದಾರೆ.

ಈ ಮಾತುಕತೆ ವೇಳೆ ಬೆಳಗಾವಿ ರಾಜಕೀಯದಲ್ಲಿ ಮೂಗು ತೂರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಕೆಶಿಗೆ ಹೈಕಮಾಂಡಿನಿಂದಲೇ ಎಚ್ಚರಿಕೆ ನೀಡಬೇಕೆಂದು ರಮೇಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ. ಇದು ಸಾಧ್ಯವಾಗದಿದ್ದರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ ಖಡಕ್ ಆಗಿ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನು ಓದಿ: ಕೊನೆಗೂ ಸಚಿವ ರಮೇಶ್ ಜಾರಕಿಹೊಳಿಗೆ ಮಣಿದ ರಾಜ್ಯ ಸರ್ಕಾರ

ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಸೂಚಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರೊಂದಿಗೂ ಸಭೆ ನಡೆಸಿದ ಸಿದ್ದರಾಮಯ್ಯ, ಸೆ.30ರವರೆಗೆ ಕಾಯುವಂತೆ ಸೂಚಿಸಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಸಂದರ್ಭದಲ್ಲಿ ಅತೃಪ್ತರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಧಾನ ಮಾತುಕತೆಗಳ ಬೆನ್ನಲ್ಲೇ ಹೈಕಮಾಂಡ್ ಸೂಚನೆ ಮೇರೆಗೆ ಮಂಗಳವಾರ ದೆಹಲಿಗೆ ಸಿದ್ದರಾಮಯ್ಯ ಸಹಿತ ರಾಜ್ಯ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಇದನ್ನು ಓದಿ: ಸ್ವ ಕ್ಷೇತ್ರದಲ್ಲೇ ಸಿಎಂಗೆ ಮುಖಭಂಗ: ಕೈ ಬೆಂಬಲಿತ ಬಿಜೆಪಿ ಅಭ್ಯರ್ಥಿಗೆ ಜಯ

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ದೆಹಲಿಗೆ ಪ್ರಯಾಣಿಸುತ್ತಿದ್ದು, ಹೈಕಮಾಂಡ್ ಬುಲಾವ್ ನೀಡಿಲ್ಲ ಸ್ಪಷ್ಪಪಡಿಸಿದ್ದಾರೆ. ಕಾಂಗ್ರೆಸ್ ಒಳ ಬೇಗುದಿಯ ನಡುವೆಯೇ, ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯರೇ ಶ್ರೀರಕ್ಷೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯರೇ ಕಂಟಕ ಅನ್ನೋದೆಲ್ಲಾ ಸುಳ್ಳು. ಅವರ ಶ್ರೀರಕ್ಷೆಯಿಂದಲೇ ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಅಂತ ತಿಳಿಸಿದ್ದಾರೆ. ನಮ್ಮ ಬಳಿ 104 ಶಾಸಕರಿದ್ದಾರೆ ಅಂತ ಹೇಳುವವರೇ ಈ ಸರ್ಕಾರಕ್ಕೆ ವಿಲನ್ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್ ದೂರು:
ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರಂತೂ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಇವರಿಬ್ಬರ ನಿರ್ಲಿಪ್ತತೆಯಿಂದಾಗಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗಿದೆ ಅಂತ ದೂರಿದ್ದಾರೆ. ಸಚಿವ ಜಾರಕಿಹೊಳಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ ಅತೃಪ್ತ ಶಾಸಕರು ದು:ಖ-ದುಮ್ಮಾನ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

ಕ್ಷೇತ್ರಗಳ ಅಭಿವೃದ್ಧಿ, ಮಂತ್ರಿ ಮಾಡದಿರುವುದಕ್ಕೆ ಅಸಮಾಧಾನವಿದ್ದು ಮಂಗಳವಾರ ಅತೃಪ್ತ ಶಾಸಕರೆಲ್ಲಾ ಸೇರಿ ನಮ್ಮ ಮನಸ್ಸಿನಲ್ಲಿ ಏನಿದೆ ಅಂತ ಹೇಳುತ್ತೇವೆ ಎಂದು ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ. ಶಾಸಕ ಭೀಮಾನಾಯ್ಕ್ ಕೂಡ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಈ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕವಾಗಲಿದ್ದು, ಅಲ್ಲಿಯವರೆಗೆ ಕಾಯಿರಿ ಅಂತ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ನಾನ್ಯಾಕೆ ರಾಜೀನಾಮೆ ಕೊಡ್ಲಿ ಸ್ವಾಮಿ: ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವೇನು?
– ದೋಸ್ತಿ ಸರ್ಕಾರವಿದ್ದರೂ ನಮ್ಮನ್ನು ಕಡೆಗಣನೆ ಮಾಡಲಾಗಿದೆ
– ಡಿಸಿಎಂ ಪರಮೇಶ್ವರ್, ಸಚಿವ ಡಿಕೆಶಿ ಸ್ಪಂದಿಸುತ್ತಿಲ್ಲ
– ನಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಯಾರೂ ಅಲಿಸುತ್ತಿಲ್ಲ
– ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕರಿಗೆ ಸೀಮಿತವಾಗಿದ್ದಾರೆ
– ಸರ್ಕಾರ ಮಟ್ಟದಲ್ಲಿ ನಮ್ಮ ಸಮಸ್ಯೆಗಳು ಬಗೆಹರಿಯುತ್ತಿಲ್ಲ
– ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಹೋಗಲು ಆಗುತ್ತಿಲ್ಲ
– ನಾವು 3-4 ಬಾರಿ ಗೆದ್ದಿದ್ದೇವೆ ನಮಗೂ ಸಚಿವ ಸ್ಥಾನ ಬೇಕು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *