ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ

Public TV
2 Min Read

– ಪೊಲೀಸರಿಗೆ ಮಾಜಿ ಸಿಎಂ ಎಚ್ಚರಿಕೆ

ಮಂಡ್ಯ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಇಲ್ಲಿ ನಡೆದಿರುವ ಲಾಠಿ ಚಾರ್ಜ್ ಸರ್ಕಾರದ ರಾಕ್ಷಸಿ ಪ್ರವೃತ್ತಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ.

ಮಂಡ್ಯದ ಕೆರೆಗೋಡುನಲ್ಲಿ ಹನುಮ ಧ್ವಜ ತೆರವು ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಿಮಗಿಂತ ಡಬಲ್ ರಾಷ್ಟ್ರಧ್ವಜ (National Flag) ಮತ್ತು ನಾಡಧ್ವಜದ ಮೇಲೆ ನಮಗೆ ಗೌರವವಿದೆ. ಸರ್ಕಾರದ ಉದ್ಧಟತನ ಕಾಣುತ್ತಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಒಬ್ಬರ ಕಣ್ಣಿಗೆ ಏಟು ಬಿದ್ದಿದೆ. ಕಣ್ಣು ಹೋಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಣು ತಂದು ಕೊಂಡುತ್ತಿದ್ರಾ ಎಂದು ಪ್ರಶ್ನಿಸಿದರು.

ಪೊಲೀಸರೇ ಎಚ್ಚರ. ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ನಾನು ನೋಡ್ತೀನಿ. ಎಚ್ಚರಿಕೆಯಿಂದ ಇರಿ. ಯಾವಾನೋ ಹೇಳುತ್ತಾನೆ ಅಂತಾ ಹೇಗೆ ಬೇಕೋ ಹಾಗೇ ಕೆಲಸ ಮಾಡುವುದನ್ನು ನಾವು ಒಪ್ಪಲ್ಲ. ನಿನ್ನೆ ಪೊಲೀಸರು ಮಾಡಿರೋ ದೌರ್ಜನ್ಯವನ್ನು ಈ ಸರ್ಕಾರ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವೇ ಸಂಘರ್ಷಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ಸಿಎಂ, ಸೋನಿಯಾ ಗಾಂಧಿಯವರಿಗೂ ಹೀಗೆ ಮಾತಾಡಿದ್ದಾರಾ?: ಛಲವಾದಿ ನಾರಾಯಣಸ್ವಾಮಿ

ಮಂಡ್ಯ (Mandya) ಜಿಲ್ಲಾಧಿಕಾರಿಯನ್ನು ಮೊದಲು ಅಮಾನತು ಮಾಡಿ ಇಲ್ಲಿಂದ ಹೊರಗೆ ಕಳುಹಿಸಿ. ಈ ಘಟನೆಗೆಲ್ಲ ಕಾರಣ ಮಂಡ್ಯ ಜಿಲ್ಲಾಧಿಕಾರಿ. ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಇಲ್ಲಿ ನಡೆದಿರುವ ಲಾಠಿ ಚಾರ್ಜ್ ಸರ್ಕಾರದ ರಾಕ್ಷಸಿ ಪ್ರವೃತ್ತಿ ತೋರಿಸುತ್ತದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಿದ್ದೇನೆ. ನಿಮ್ಮ ತಪ್ಪು ತಿದ್ದಿಕೊಳ್ಳಿ. ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಿನಲ್ಲಿ ರಾಮನ ಇದ್ದರೆ ಸಾಲಲ್ಲ ನಡವಳಿಕೆಯಲ್ಲೂ ರಾಮ ಇರಬೇಕು. ಇದು ರಾಜಕೀಯ ಲಾಭ ನಷ್ಟದ ಹೋರಾಟವಲ್ಲ ಎಂದು ಹೇಳಿದರು.

ಧ್ವಜ ಸ್ಥಂಭ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಯಾಗಿದೆ. ಅಧಿಕಾರಿಗಳ ಮೂಲಕ ಉದ್ಧಟತನ ತೋರಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಕೆರಗೋಡಿನಲ್ಲಿ ಶಾಂತಿ ಸಭೆ ಕರೆಯಬೇಕು. ಧ್ವಜದ ಮರು ಸ್ಥಾಪನೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಇರುತ್ತದೆ ಎಂದು ಹೆಚ್‍ಡಿಕೆ ಕಿಡಿಕಾರಿದ್ದಾರೆ.

Share This Article