ತೇಲಲೀಯದು ಗುಂಡು, ಮುಳುಗಲೀಯದು ಬೆಂಡು: ಅನರ್ಹರ ಕಾಲೆಳೆದ ಎಚ್‍ಡಿಕೆ

Public TV
1 Min Read

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಸವಣ್ಣನವರ ವಚನದ ಮೂಲಕ ಅನರ್ಹ ಶಾಸಕರ ಪರಿಸ್ಥಿತಿಯ ಕುರಿತು ಲೇವಡಿ ಮಾಡಿದ್ದಾರೆ.

ಟ್ವೀಟ್ ಮಾಡಿರುವ ಮಾಜಿ ಸಿಎಂ, ಕಾಲಲಿ ಕಟ್ಟಿದ ಗುಂಡು… ಕೊರಳಲಿ ಕಟ್ಟಿದ ಬೆಂಡು… ತೇಲಲೀಯದು ಗುಂಡು.. ಮುಳುಗಲೀಯದು ಬೆಂಡು… ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು ಎಂದು ವ್ಯಂಗ್ಯವಾಡಿದ್ದಾರೆ.

ಸಂಸಾರದಲ್ಲಿ ವ್ಯಕ್ತಿಯ ಕರುಣಾಜನಕ ಸ್ಥಿತಿಯನ್ನು ವಿಶ್ವಗುರು ಬಸವಣ್ಣನವರು ತಮ್ಮ ವಚನದ ಮೂಲಕ ತಿಳಿಸಿದ್ದಾರೆ. ಈ ವಚವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರಿಗೆ ಹೋಲಿಕೆ ಮಾಡಿದ್ದಾರೆ. ಅನರ್ಹರ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತಲೂ ಇಲ್ಲ, ಇತ್ತಲೂ ಎಂದು ಗೇಲಿ ಮಾಡಿದ್ದಾರೆ.

ಇದಕ್ಕೂ ಮುನ್ನ ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಹೇಳಿದ್ದರು.

ನೆರೆ ಪರಿಹಾರ ತರಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರಿಗೆ ಸಮಯ ಇಲ್ಲ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ತರಾತುರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಹೋದರು. ಅಲ್ಲಿ ಏನು ಚರ್ಚೆ ಆಗಿದೆ. ನೆರೆ ಪರಿಹಾರದ ಬಗ್ಗೆ ಚರ್ಚೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *