ರೈತರ ಉತ್ಪನ್ನಗಳನ್ನ ಸರ್ಕಾರವೇ ಖರೀದಿಸಿ ಮಾರಾಟ ಮಾಡಲಿ: ಎಚ್‍ಡಿಕೆ

Public TV
2 Min Read

– ಸರ್ಕಾರ ಮೂಗಿಗೆ ತುಪ್ಪ ಸವರೋ ಬಗ್ಗೆ ಮಾತನಾಡ್ತಿದೆ
– ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಈ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ರೈತರಿಗೆ ಪರಿಹಾರ ನೀಡಬೇಕೆಂದು ಹೇಳಿದ್ದಾರೆ. ಮೊದಲಿಗೆ “ಲಾಕ್ ಡೌನ್ 3ನೇ ವಾರದ ಮುಕ್ತಾಯಕ್ಕೆ ಬರುತ್ತಿದ್ದರೂ ಬೆಳೆದ ಬೆಳೆ ಮಾರಾಟವಾಗದೆ ಜಮೀನಿನಲ್ಲೇ ಕೊಳೆಯುತ್ತಿರುವುದನ್ನು ಕಂಡು ರೈತರು ‘ಹೆತ್ತ ಮಕ್ಕಳು’ ಅಕಾಲ ಮರಣಕ್ಕೀಡಾದಂತೆ ಸಂಕಟ ಪಡುತ್ತಿದ್ದಾರೆ. ರೈತರ ಸಂಕಷ್ಟ ಪರಿಹರಿಸಲು ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರು ಬೆಳೆದ ಬೆಳೆಗಳನ್ನು ಸಮೀಕ್ಷೆ ಮಾಡಿ ಮೂರು ದಿನದಲ್ಲಿ ಪರಿಹಾರ ನೀಡಲಿ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಸುಗಮ ಮಾರಾಟ, ಸಾಗಾಣಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಇನ್ನೂ ಕ್ರಿಯಾಶೀಲವಾಗಿಲ್ಲ. ಬರೀ ಚಿಂತನ-ಮಂಥನದಲ್ಲೇ ಕಾಲ ಕಳೆಯುವುದನ್ನು ಬಿಟ್ಟು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.

ರಾಜ್ಯಾದ್ಯಂತ ದಾಳಿಂಬೆ, ದ್ರಾಕ್ಷಿ, ಬಾಳೆ, ಕಲ್ಲಂಗಡಿ, ಕರ್ಬುಜ, ಮಾವು ಸೇರಿದಂತೆ ಹೂವು ತರಕಾರಿ ಉತ್ಪನ್ನಗಳನ್ನು ಬೆಳೆದ ರೈತರು ಸಾಗಣೆ, ಮಾರುಕಟ್ಟೆ ಸಿಗದೆ ಅಲ್ಲೇ ಕೊಳೆಸುವ, ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿರುವ ಪ್ರಸಂಗಗಳು ದಿನನಿತ್ಯ ಹೆಚ್ಚಾಗುತ್ತಿವೆ ಎಂದು ಬೇಸರದಿಂದ ಹೇಳಿದ್ದಾರೆ.

ಸರ್ಕಾರ ‘ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ’ ಎನ್ನುವ ಮೂಗಿಗೆ ತುಪ್ಪ ಸವರುವ ಮಾತನಾಡುತ್ತಿದೆಯೇ ಹೊರತು ಕಂಗಾಲಾದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೆ ರಾಜ್ಯದಾದ್ಯಂತ ರೈತರು ಪರಿತಪಿಸುತ್ತಿರುವ ನೂರಾರು ಉದಾಹರಣೆಗಳು ಪುಷ್ಟಿ ನೀಡುತ್ತಿವೆ.

ಕೈಗೆ ಬಂದ ಬೆಳೆಯು ಮಾರಾಟವಾಗದೆ ಮುಂದೇನು? ಎಂದು ಚಿಂತಾಕ್ರಾಂತರಾಗಿರುವ ರೈತರಿಗೆ ಸಹಾಯ ಹಸ್ತಚಾಚಲು ಆಮೆ ವೇಗದಲ್ಲಿರುವ ಸರ್ಕಾರ, ಮುಂಗಾರು ಬೆಳೆಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಕೊರತೆ ಉಂಟಾಗದಂತೆ ಎಚ್ಚರ ವಹಿಸುತ್ತಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

“ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು. ಲಾಕ್‍ಡೌನ್ ಮುಂದುವರಿಕೆ ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯೋನ್ಮುಖವಾಗಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *