ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

Public TV
1 Min Read

-ಆದಿತ್ಯ ‘ರಾವ್’ ಉಗ್ರನ ಬೆನ್ನಿಗೆ ಬಿಜೆಪಿ ನಿಂತಿದೆ

ಬೆಂಗಳೂರು: ಹೊಳೆಯುವ ಪದಾರ್ಥಕ್ಕೆ ಗ್ರಾಮೀಣ ಭಾಗದಲ್ಲಿ ಮಿಣಿ ಮಿಣಿ ಎಂಬ ಪದ ಬಳಕೆ ಮಾಡಲಾಗುತ್ತದೆ. ಆ ಪದವನ್ನು ಟ್ರೋಲ್ ಮಾಡುವ ಮೂಲಕ ಕನ್ನಡ ಮತ್ತು ಗ್ರಾಮೀಣ ಕರ್ನಾಟಕಕ್ಕೆ ಅಪಮಾನ ಮಾಡಿದಂತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ.

ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *