ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ; ಕ್ಷೇತ್ರಕ್ಕೆ ಬನ್ನಿ ಎಂಬ ಒತ್ತಾಯ ತಿರಸ್ಕರಿಸಿದ ಹೆಚ್ಡಿಕೆ, ನಿಖಿಲ್

Public TV
2 Min Read

ಬೆಂಗಳೂರು: ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಘೋಷಣೆಗೂ ಮುನ್ನ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್‌ (JDS) ಮುಖಂಡರ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಮಿತ್ರಪಕ್ಷ ಬಿಜೆಪಿ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದರು.

ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ, ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುಖಂಡರು ಮಾಡಿದ ಒತ್ತಾಯವನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಯವಾಗಿ ತಿರಸ್ಕರಿಸಿದರು. ಇದನ್ನೂ ಓದಿ: ಆನೆ ತುಳಿತಕ್ಕೆ ಕೇರಳದ ವ್ಯಕ್ತಿ ಬಲಿ ಪ್ರಕರಣ – ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ಪರಿಹಾರ ತಿರಸ್ಕರಿಸಿದ ಕುಟುಂಬ

ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟ ಮಾಜಿ ಸಿಎಂ, ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಅವರು ಎನ್‌ಡಿಎ ಅಭ್ಯರ್ಥಿಯೇ ಆಗಿರುತ್ತಾರೆ. ಅವರ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ನೇರ ಮಾತುಗಳಲ್ಲಿ ಮುಖಂಡರಿಗೆ ತಿಳಿಸಿದರು.

ಇದೇ ವೇಳೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡಸಿದರು. ಮುಖಂಡರಿಂದ ಸಲಹೆ ಪಡೆದ ಮಾಜಿ ಸಿಎಂ ತಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದರು. ಕ್ಷೇತ್ರದಲ್ಲಿ ಪಕ್ಷಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡುವಂತೆ ಮನವಿ ಮಾಡಿದ ಮುಖಂಡರು, ಆಕಾಂಕ್ಷಿಗಳ ಬಗ್ಗೆಯೂ ಚರ್ಚೆ ನಡೆಸಿದರು. ಹಲವು ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇದನ್ನೂ ಓದಿ: ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

ಜೆಡಿಎಸ್- ಬಿಜೆಪಿ ಒಂದಾಗಿ ಎದುರಿಸಿದರೆ ಖಚಿತವಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗೆಲ್ಲಬಹುದು. ಹಿಂದೆ ಬಿ.ಎನ್.ಬಚ್ಚೇಗೌಡರ ಗೆಲುವಿನಲ್ಲಿ ಜೆಡಿಎಸ್ ಪಾತ್ರ ದೊಡ್ಡದಿತ್ತು. ಆದ್ದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಕ್ಷೇತ್ರದ ಮುಖಂಡರು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು.

ಈ ಬಗ್ಗೆ ತಾವು ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸುವುದಾಗಿ ಮುಖಂಡರಿಗೆ ತಿಳಿಸಿದ ಹೆಚ್‌ಡಿಕೆ, ಕ್ಷೇತ್ರ ಯಾವ ಪಕ್ಷದ ಪಾಲಾದರೂ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ ಹಂತದಲ್ಲಿಯೂ ಮಿತ್ರಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ವಿಶ್ವಾಸ-ನಂಬಿಕೆಯಿಂದ ದುಡಿಮೆ ಮಾಡಬೇಕು.‌ ಅಭ್ಯರ್ಥಿ ಆಯ್ಕೆ ಬಗ್ಗೆ ಮಿತ್ರಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸುವೆ ಎಂದು ಹೇಳಿದರು. ಇದನ್ನೂ ಓದಿ: ಬರಗಾಲದಲ್ಲಿ ಗ್ಯಾರಂಟಿ ಸಮಾವೇಶ – ಸಿಎಂ ವಿರುದ್ಧ ಹೆಚ್‍ಡಿಕೆ ಕೆಂಡ

ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾದ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಇ.ಕೃಷ್ಣಪ್ಪ, ಹೆಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಕ್ಷೇತ್ರದ ಹಿರಿಯ ಮುಖಂಡರಾದ ಮುನೇಗೌಡ, ಡಿ. ಜೆ.ನಾಗರಾಜ್ ರೆಡ್ಡಿ, ನರಸಿಂಹ ಮೂರ್ತಿ, ಹರೀಶ್‌ ಗೌಡ, ಅಪ್ಪಣ್ಣಯ್ಯ, ಮಧು, ಹೊಸಕೋಟೆ ಶ್ರೀಧರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Share This Article