ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಬೇಗಂ ಖಲೀದಾ ಜಿಯಾ ನಿಧನ

1 Min Read

ಢಾಕಾ: ಬಾಂಗ್ಲಾದೇಶದ (Bangladesh) ಮೊದಲ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಧ್ಯಕ್ಷೆ ಬೇಗಂ ಖಾಲಿದಾ ಜಿಯಾ (Begum Khaleda Zia) ಅವರು ಇಂದು ಬೆಳಗ್ಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಖಾಲಿದಾ ಜಿಯಾ ಅವರು ಬಾಂಗ್ಲಾದೇಶದ ಆಧುನಿಕ ರಾಜಕಾರಣದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ನಾಯಕಿ. ಅವರ ನಿಧನದಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಒಂದು ಯುಗದ ಅಂತ್ಯವಾಗಿದೆ. ಅವರ ಪ್ರತಿಸ್ಪರ್ಧಿ ಶೇಖ್ ಹಸೀನಾ ಅವರೊಂದಿಗಿನ ದಶಕಗಳ ರಾಜಕೀಯ ಸ್ಪರ್ಧೆ ಬಾಂಗ್ಲಾದೇಶದ ಇತಿಹಾಸವನ್ನೇ ರೂಪಿಸಿತ್ತು. ಈ ಇಬ್ಬರು ಮಹಿಳಾ ನಾಯಕಿಯರನ್ನು ‘ಬ್ಯಾಟಲಿಂಗ್ ಬೇಗಂಸ್’ ಎಂದು ಕರೆಯಲಾಗುತ್ತಿತ್ತು. ಇದನ್ನೂ ಓದಿ: ಬಾಂಗ್ಲಾದೇಶದ ಗಾಯಕನ ಸಂಗೀತ ಕಛೇರಿ ರದ್ದು; ಸ್ಥಳದಲ್ಲಿ ಗುಂಪು ದಾಳಿ – 25 ಮಂದಿಗೆ ಗಾಯ

ಜೀವನ ಮತ್ತು ರಾಜಕೀಯ ಪಯಣ
1945ರಲ್ಲಿ ಬ್ರಿಟಿಷ್ ಇಂಡಿಯಾದ ದಿನಾಜ್‌ಪುರ ಜಿಲ್ಲೆಯಲ್ಲಿ (ಪ್ರಸ್ತುತ ಪಶ್ಚಿಮ ಬಂಗಾಳ) ಜನಿಸಿದ ಖಾಲಿದಾ ಜಿಯಾ ಅವರ ಬಾಲ್ಯ ಹೆಸರು ಖಾಲಿದಾ ಖಾನಂ. ಅವರ ತಂದೆ ಇಸ್ಕಂದರ್ ಅಲಿ ಮಜುಮ್ದಾರ್ ಚಹಾ ವ್ಯಾಪಾರಿ. 1960ರಲ್ಲಿ ಪಾಕಿಸ್ತಾನ ಸೇನೆಯ ಅಧಿಕಾರಿ ಜಿಯಾವುರ್ ರೆಹಮಾನ್ ಅವರನ್ನು ವಿವಾಹವಾದರು. ಇಬ್ಬರಿಗೂ ತಾರಿಕ್ ರೆಹಮಾನ್ ಮತ್ತು ಅರಫತ್ ರೆಹಮಾನ್ (ಕೋಕೋ) ಎಂಬ ಇಬ್ಬರು ಪುತ್ರರು.

1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಯಾವುರ್ ರೆಹಮಾನ್ ಪ್ರಮುಖ ಪಾತ್ರ ವಹಿಸಿದ್ದರು. 1977ರಲ್ಲಿ ಅವರು ಬಾಂಗ್ಲಾದೇಶದ ಅಧ್ಯಕ್ಷರಾದರು. ಆದರೆ 1981ರಲ್ಲಿ ಸೇನಾ ದಂಗೆಯಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ಈ ದುರಂತದ ನಂತರ ಖಾಲಿದಾ ಜಿಯಾ ರಾಜಕಾರಣಕ್ಕೆ ಇಳಿದರು. ಅವರ ಪತಿಯ ಸ್ಥಾಪಿಸಿದ ಬಿಎನ್‌ಪಿ ಪಕ್ಷವನ್ನು ಪುನಶ್ಚೇತನಗೊಳಿಸಿ, ಸೇನಾ ಆಡಳಿತದ ವಿರುದ್ಧ ಹೋರಾಟ ನಡೆಸಿದರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ – ಯೂನಸ್ ಸರ್ಕಾರದಿಂದ 2,900 ದೌರ್ಜನ್ಯ; ಭಾರತದಿಂದ ಕಠಿಣ ಸಂದೇಶ

1991ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದರು. 1991-1996 ಮತ್ತು 2001-2006ರ ಅವಧಿಯಲ್ಲಿ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರ ಆಡಳಿತದಲ್ಲಿ ಖಾಸಗಿ ಉದ್ಯಮಗಳನ್ನು ಉತ್ತೇಜಿಸಿ, ಅಮೆರಿಕ, ಚೀನಾ ಮತ್ತು ಅರಬ್ ದೇಶಗಳೊಂದಿಗೆ ಸಂಬಂಧ ಬಲಪಡಿಸಿದರು.

ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನೊಂದಿಗಿನ ತೀವ್ರ ಸ್ಪರ್ಧೆ, ಭ್ರಷ್ಟಾಚಾರ ಆರೋಪಗಳು, ಚುನಾವಣಾ ಬಹಿಷ್ಕಾರಗಳು ಅವರ ರಾಜಕೀಯ ಜೀವನದ ಭಾಗವಾಗಿದ್ದವು. 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, 2024ರಲ್ಲಿ ಹಸೀನಾ ಅವರ ಪತನದ ನಂತರ ಬಿಡುಗಡೆಯಾದರು. 2025ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅವರನ್ನು ಎಲ್ಲ ಪ್ರಕರಣಗಳಿಂದ ಖುಲಾಸೆಗೊಳಿಸಿತು.

ಕಳೆದ ಒಂದು ದಶಕದಿಂದ ಖಾಲಿದಾ ಜಿಯಾ ಲಿವರ್ ಸಿರೋಸಿಸ್, ಮಧುಮೇಹ, ಹೃದ್ರೋಗ, ಕೀಲು ನೋವು, ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು. 2025ರ ಆರಂಭದಲ್ಲಿ ಲಂಡನ್‌ನಲ್ಲಿ ಚಿಕಿತ್ಸೆ ಪಡೆದು ಮೇ ತಿಂಗಳಲ್ಲಿ ಮರಳಿದರು. ನವೆಂಬರ್‌ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾದರು. ಅವರ ಪುತ್ರ ತಾರಿಕ್ ರೆಹಮಾನ್ ಅವರು ಇತ್ತೀಚೆಗೆ ಲಂಡನ್‌ನಿಂದ ಮರಳಿ ಅವರೊಂದಿಗಿದ್ದರು.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರು ಸಂತಾಪ ಸಂದೇಶ ರವಾನಿಸಿದ್ದಾರೆ. ಬಿಎನ್‌ಪಿ ಏಳು ದಿನಗಳ ರಾಷ್ಟ್ರೀಯ ದುಃಖಾಚರಣೆ ಘೋಷಿಸಿದೆ.

Share This Article