– ಎದ್ದು ಹೊರ ನಡೆಯುವಂತೆ ಗದರಿದ ಶರಣಪ್ರಕಾಶ್ ಪಾಟೀಲ್
ರಾಯಚೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ರಮ್ಮಿ ಆಟದಲ್ಲಿ ಮಗ್ನರಾಗಿದ್ದರು. ಅಧಿಕಾರಿಯ ವರ್ತನೆಗೆ ಗರಂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ರಾಯಚೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ರಮ್ಮಿ ಆಟದಲ್ಲಿ ಮಗ್ನರಾಗಿದ್ದರು. ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರಮ್ಮಿ ಆಟವಾಡುತ್ತ ಕುಳಿತಿದ್ದರು. ಒಂದು ಕಡೆ ಶಾಸಕರು, ಸಚಿವರ ಮಧ್ಯೆ ಕೆಡಿಪಿ ಸಭೆಯಲ್ಲಿ ಬಿರುಸಿನ ಚರ್ಚೆ, ಆಕ್ರೋಶ, ಅಸಮಾಧಾನ, ಪ್ರತಿಭಟನೆ ನಡೆದಿತ್ತು. ಇನ್ನೊಂದೆಡೆ ಜಿಲ್ಲಾ ಮಟ್ಟದ ಅಧಿಕಾರಿ ರಮ್ಮಿ ಆಟದಲ್ಲಿ ಮುಳುಗಿದ್ದರು. ಸಭೆಯ ಆಗುಹೋಗುಗಳ ಬಗ್ಗೆ ಆಲಿಸದೇ ಆಟದಲ್ಲಿ ಮಗ್ನರಾಗಿದ್ದರು.
ಬಳಿಕ ಮಾಹಿತಿ ತಿಳಿದು ಅಧಿಕಾರಿ ವರ್ತನೆಗೆ ಗರಂ ಆದ ಸಚಿವ ಶರಣಪ್ರಕಾಶ ಪಾಟೀಲ್ ತರಾಟೆಗೆ ತೆಗೆದುಕೊಂಡರು. ಸಭೆಯಿಂದ ಮೊದಲು ಹೊರ ನಡೆಯುವಂತೆ ಗದರಿದರು. ಕೂಡಲೇ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಅಮಾನತ್ತಿಗೆ ಶಿಫಾರಸ್ಸು ಮಾಡಲು ಸಚಿವ ಶರಣಪ್ರಕಾಶ್ ಪಾಟೀಲ್ ಜಿಲ್ಲಾಧಿಕಾರಿ ನಿತೀಶ್ ಗೆ ಸೂಚಿಸಿದ್ದಾರೆ.