ವನ್ಯಜೀವಿ ಅಪರಾಧ ಪತ್ತೆಗೆ ಬೇಕು ಸ್ನಿಫರ್ ಡಾಗ್ಸ್- ಖರೀದಿಗೆ ಅರಣ್ಯ ಇಲಾಖೆಯಿಂದ ಹಿಂದೇಟು!

Public TV
2 Min Read

ಬೆಂಗಳೂರು: ವನ್ಯಜೀವಿ ಅಪರಾಧಗಳನ್ನು ಪತ್ತೆ ಮಾಡುವಲ್ಲಿ ಹೆಸರು ಮಾಡಿರುವ ಸ್ನಿಫರ್ ಡಾಗ್ಸ್ ಗಳನ್ನು ಖರೀದಿಸಲು ರಾಜ್ಯ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಅಪರಾಧಗಳನ್ನು ಪತ್ತೆಹಚ್ಚಲು ಸ್ನಿಫರ್ ಡಾಗ್ಸ್ ಗಳು ಅವಶ್ಯಕವಾಗಿ ಅರಣ್ಯ ಇಲಾಖೆಗೆ ಬೇಕಾಗಿದೆ. ಆದರೆ ನಮ್ಮ ರಾಜ್ಯದಲ್ಲಿರುವ ಸ್ನೀಫರ್ ಡಾಗ್‍ಗಳ ಸಂಖ್ಯೆ ಕೇವಲ ಎರಡು ಮಾತ್ರ. ಸದ್ಯಕ್ಕೆ ಇವು ಒಂದು ದಾಂಡೇಲಿ ಮತ್ತೊಂದು ಬಂಡೀಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಏನಿದು ಸ್ನಿಫರ್ ಡಾಗ್?
ಸ್ನಿಫರ್ ಡಾಗ್ ಎನ್ನುವುದು ಒಂದು ವಿಶೇಷ ಶ್ವಾನಪಡೆಯಾಗಿದೆ. ಟ್ರಾಫಿಕ್ ಹೆಸರಿನ ಸರ್ಕಾರೇತರ ಸಂಸ್ಥೆಯು ಮಧ್ಯಪ್ರದೇಶದ ಬಿಎಸ್‍ಎಫ್ ಕ್ಯಾಂಪ್‍ನಲ್ಲಿ ವಿಶೇಷ ತರಬೇತಿಯನ್ನು ಕೊಡುತ್ತದೆ. ಸ್ನಿಫರ್ ಡಾಗ್ ಪ್ರೋಗ್ರಾಂನಲ್ಲಿ ಕೇವಲ ಜರ್ಮನ್ ಷಫರ್ಡ್ ಹಾಗೂ ಬೆಲ್ಜಿಯನ್ ಮೆಲಿನಾಯ್ ತಳಿಯ ಶ್ವಾನಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳುತ್ತಾರೆ. ಈ ಶ್ವಾನಗಳಿಗೆ 9 ತಿಂಗಳು ಕೊಡುವ ತರಬೇತಿಯ ಖರ್ಚು-ವೆಚ್ಚವನ್ನ ಸಹ ಎನ್ ಜಿಓ ನೋಡಿಕೊಳ್ಳುತ್ತದೆ.

ವನ್ಯಜೀವಿ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ವಿಶೇಷವಾಗಿ ತರಬೇತಿ ಪಡೆದ ಈ ಸ್ನಿಫರ್ ಡಾಗ್ಸ್‍ಗಳು ಬೇಟೆಯಾಡಿದವರ ಬೆನ್ನತ್ತಿ ಹಿಡಿಯೋ ಚಾಣಾಕ್ಷತನವನ್ನು ಹೊಂದಿವೆ. ವನ್ಯಜೀವಿಗಳಿಗೆ ವಿಷ ಹಾಕಿ ಕೊಂದಿದ್ದರೂ ಪತ್ತೆ ಮಾಡೋವಷ್ಟು ಬುದ್ಧಿವಂತ ಪ್ರಾಣಿಗಳಿವು. ಯಾವುದೇ ವನ್ಯಜೀವಿ ಅಪರಾಧ ಪ್ರಕರಣ ಭೇದಿಸಬೇಕು ಎಂದರೂ ಸ್ನಿಫರ್ ಡಾಗ್ ಸಹಾಯ ಅತ್ಯವಶ್ಯಕ. ಇದನ್ನೂ ಓದಿ: ಭಾರತೀಯ ಸೇನೆಗೆ ರಾಜ್ಯದ ಮುಧೋಳ ಸೇರ್ಪಡೆ: ವಿಶೇಷತೆ ಏನು? ಬೇರೆ ನಾಯಿಗಳಿಗಿಂತ ಭಿನ್ನ ಹೇಗೆ?

ಎಲ್ಲೇ ವನ್ಯಜೀವಿಗಳನ್ನ ಬೇಟೆಯಾಡಿದರೂ ಆರೋಪಿಗಳನ್ನ ಪತ್ತೆ ಮಾಡೋದ್ರಲ್ಲಿ ಸ್ನಿಫರ್ ಡಾಗ್ ನಿಸ್ಸೀಮ. ಆದರೆ ನಮ್ಮ ಅರಣ್ಯ ಇಲಾಖೆ ಮಾತ್ರ ಈ ನಾಯಿಗಳನ್ನು ಸಮಪರ್ಕವಾಗಿ ಬಳಸಿಕೊಳ್ಳದೆ ಇರುವುದು ದುರದೃಷ್ಟ ಸಂಗತಿ. ಇಂತಹ ಬ್ರಿಲಿಯಂಟ್ ಸ್ನಿಫರ್ ಡಾಗ್ಸ್ ಗಳಿಗೆ ಎಲ್ಲಾ ರಾಜ್ಯಗಳಲ್ಲೂ ಭಾರೀ ಬೇಡಿಕೆ ಇದ್ದು, ರಾಜ್ಯ ರಾಜ್ಯಗಳ ನಡುವೆ ಪೈಪೋಟಿ ಬೇರೆ ಇದೆ. ಆದರೆ ನಮ್ಮ ರಾಜ್ಯದಲ್ಲೇ ಸ್ನೀಫರ್ ಡಾಗ್ಸ್‍ಗಳ ಮೇಲೆ ಅದ್ಯಾಕೋ ನಿರ್ಲಕ್ಷ್ಯ, ಬೇಜವಬ್ದಾರಿ ತೋರಿದೆ ಎಂದು ವನ್ಯಜೀವಿ ತಜ್ಞ ರಾಜೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಪ್ರತೀ ವರ್ಷ ಟ್ರಾಫಿಕ್ ಸಂಸ್ಥೆಯು ದೇಶದ ಎಲ್ಲಾ ರಾಜ್ಯದ ಅರಣ್ಯ ಇಲಾಖೆಗೆ ಎಷ್ಟು ನಾಯಿಯ ಅಗತ್ಯವಿದೆ ಎಂದು ಪತ್ರ ಬರೆಯುತ್ತಾರೆ. ಇದಕ್ಕೆ ಅರಣ್ಯ ಇಲಾಖೆ ಮಾಡಬೇಕಿರೋದು ಇಷ್ಟೇ. ಒಬ್ಬ ವಾಚರ್, ಒಬ್ಬ ಗಾರ್ಡ್‍ನ್ನ 9 ತಿಂಗಳು ತರಬೇತಿಗೆ ಕಳಿಸಿಕೊಡಬೇಕು. ಟ್ರಾಫಿಕ್ ಸಂಸ್ಥೆ ಹತ್ತು ನಾಯಿಗಳನ್ನ ಕೇಳಿದ್ರೂ ಕೊಡಲು ಸಿದ್ಧವಿದೆ. ಆದರೆ ನಮ್ಮ ಅರಣ್ಯ ಇಲಾಖೆ ಮಾತ್ರ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಷ್ಟು ಸ್ನಿಫರ್ ಡಾಗ್ಸ್ ಬೇಕು ಅಂತ ವಾಪಸ್ ಪತ್ರವನ್ನೂ ಬರೆದಿಲ್ಲ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *