ಚಿಕ್ಕಮಗಳೂರು: ಬೋನಿನಲ್ಲಿ ಸೆರೆಯಾದ ಚಿರತೆಯನ್ನು (Leopard) ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲನ್ನು ತೆಗೆದು ಅದನ್ನು ಕೆರಳಿಸಿದ ಘಟನೆ ಅಜ್ಜಂಪುರ (Ajjampur) ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಾರಾಯಣಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು. ಜನ ಹೊಲ, ಹದ್ದೆ-ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಮಕ್ಕಳು ಕೂಡ ಶಾಲೆಗೆ ಹೋಗಲು ಭಯಪಡುತ್ತಿದ್ದರು. ಹಾಗಾಗಿ ಅರಣ್ಯ ಇಲಾಖೆಯವರು (Forest Department) ಗ್ರಾಮದ ಶಿವಯ್ಯ ಎಂಬವರ ಮನೆ ಬಳಿ ಬೋನನ್ನು ಇಟ್ಟಿದ್ದರು. ಶುಕ್ರವಾರ (ಆ.15) ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತ್ತು. ಇದನ್ನೂ ಓದಿ: ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – ತುರ್ತು ಭೂಸ್ಪರ್ಶ; ತಪ್ಪಿದ ದುರಂತ
ಇಂದು (ಆ.16) ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಯಾಗಿದ್ದ ಬೋನಿನ ಬಾಗಿಲನ್ನ ಅರ್ಧ ತೆಗೆದು ಅದನ್ನು ಕೆರಳಿಸಿದ್ದಾರೆ. ಚಿರತೆ ಭಯವಾಗಿ ದಾಳಿಗೆ ಯತ್ನಿಸಿದಾಗ ತಕ್ಷಣ ಬಾಗಿಲು ಹಾಕಿದ್ದಾರೆ. ಅಧಿಕಾರಿಗಳ ಈ ವರ್ತನೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಪಾಯಕಾರಿ ಪ್ರಾಣಿಯ ಜೊತೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ