ಕಾಂಗ್ರೆಸ್‌ ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು, ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ: ಮೋದಿ

Public TV
3 Min Read

– 2008ರ ಮುಂಬೈ ದಾಳಿ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಕಿಡಿ
– ಯಾವ ರಾಷ್ಟ್ರ ಕಾಂಗ್ರೆಸ್‌ ಮೇಲೆ ಒತ್ತಡ ಹೇರಿತ್ತು ಅನ್ನೋದನ್ನ ಬಹಿರಂಗಪಡಿಸಲಿ

ಮುಂಬೈ: ಕಾಂಗ್ರೆಸ್‌ ಪಕ್ಷವು ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿದೆ. ಕಾಂಗ್ರೆಸ್‌ನ (Congress) ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು. ಆದ್ರೆ ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದರು.

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ-1 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, 26/11 ದಾಳಿ (2008 Mumbai Attack) ವೇಳೆ ಜಾಗತಿಕ ಒತ್ತಡವಿತ್ತು ಎಂದಿದ್ದ ಪಿ.ಚಿದಂಬರಂ ಹೇಳಿಕೆಗೆ ತಿರುಗೇಟು ಕೊಟ್ಟರು. ಅಲ್ಲದೇ ತಮ್ಮ ಮೇಲೆ ಒತ್ತಡ ಹಾಕಿದ್ದ ದೇಶ ಯಾವುದು ಎಂದು ಕಾಂಗ್ರೆಸ್ ಬಹಿರಂಗಪಡಿಸಲಿ ಎಂದು ಬಹಿರಂಗವಾಗಿಯೇ ಸವಾಲೆಸೆದರು.

2008ರ ಮುಂಬೈ ಭಯೋತ್ಪಾದಕ ದಾಳಿಯ (Terrorist Attack) ಬಳಿಕ ಕಾಂಗ್ರೆಸ್‌ ಪಕ್ಷ ತನ್ನ ದೌರ್ಬಲ್ಯವನ್ನು ತೋರಿಸಿತು. ಅಂದಿನ ರಾಜಕೀಯ ನಿರ್ಧಾರಗಳೂ ಸಹ ಬೇರೆ ದೇಶದ ಒತ್ತಡದಿಂದ ಪ್ರಭಾವಿತವಾಗಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದರು.

ಮುಂಬೈ (Mumbai) ಭಾರತದ ಆರ್ಥಿಕ ರಾಜಧಾನಿ ಮಾತ್ರವಲ್ಲ, ಅತ್ಯಂತ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ 2008ರಲ್ಲಿ ಉಗ್ರರು ಮುಂಬೈ ಅನ್ನು ಗುರಿಯಾಗಿಸಿಕೊಂಡರು. ಆದ್ರೆ ಅಂದಿನ ಕಾಂಗ್ರೆಸ್‌ ತನ್ನ ದೌರ್ಬಲ್ಯವನ್ನ ತೋರಿಸಿತು ಎಂದು ಕಿಡಿ ಕಾರಿದರು.

ಯಾವ ದೇಶ ಅಂತಹ ಒತ್ತಡ ಹೇರಿತ್ತು?
ಮುಂದುವರಿದು… ಮಾಜಿ ಗೃಹಸಚಿವ ಪಿ.ಚಿದಂಬರಂ ಅವರು ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಇತ್ತೀಚೆಗೆ ಕಾಂಗ್ರೆಸ್‌ ನಾಯಕರೊಬ್ಬರು ಮುಂಬೈ ದಾಳಿಯ ಬಳಿಕ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದವು. ಆದ್ರೆ ಬೇರೆ ದೇಶದ ಒತ್ತಡದಿಂದಾಗಿ ಭದ್ರತಾ ಪಡೆಗಳನ್ನು ನಿಲ್ಲಿಸಿತು ಎಂದು ಬಹಿರಂಗಪಡಿಸಿದ್ದಾರೆ. ಹಾಗಿದ್ದಲ್ಲಿ, ಯಾವ ರಾಷ್ಟ್ರ ಅಂತಹ ಒತ್ತಡ ಹೇರಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.

ಕಾಂಗ್ರೆಸ್‌ನ ತಪ್ಪಿಗೆ ಜೀವಗಳು ಬಲಿಯಾಗಿವೆ
ಯಾವ ರಾಷ್ಟ್ರ ಒತ್ತಡ ಹೇರಿತು ಅನ್ನೋದನ್ನ ಬಹಿರಂಗಪಡಿಸಬೇಕು. ಏಕೆಂದ್ರೆ ಆ ನಿರ್ಧಾರದಿಂದಾಗಿಯೇ ಭಾರತ ಸಾಕಷ್ಟು ತೊಂದರೆ ಅನುಭವಿಸಬೇಕಾಯ್ತು. ಕಾಂಗ್ರೆಸ್‌ನ ದೌರ್ಬಲ್ಯಗಳು ಉಗ್ರರನ್ನ ಬಲಪಡಿಸಿತು. ಕಾಂಗ್ರೆಸ್‌ ಮಾಡಿದ ಈ ತಪ್ಪಿದೆ ಈ ದೇಶ ಪದೇ ಪದೇ ಜೀವಗಳನ್ನು ಬಲಿ ಕೊಡುವ ಮೂಲಕ ಬೆಲೆ ತೆರಬೇಕಾಯ್ತು. ಆದ್ರೆ ನಮಗೆ ರಾಷ್ಟ್ರೀಯ ಭದ್ರತೆ, ನಮ್ಮ ನಾಗರಿಕರ ಸುರಕ್ಷತೆಗಿಂತ ಬೇರಾವುದೂ ಮುಖ್ಯವಲ್ಲ ಎಂದು ಹೇಳಿದರು.

chidambaram

ಇಂದಿನ ಭಾರತ ಬಲಿಷ್ಠ ಭಾರತ, ಶತ್ರುಗಳನ್ನ ಅವರ ಮನೆಗಳಿಗೇ ನುಗ್ಗಿ ಹೊಡೆದುರುಳಿಸುತ್ತೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್‌ ಸಿಂಧೂರವೇ ಇದಕ್ಕೆ ಸ್ಪಷ್ಟ ನಿದರ್ಶನ. ಆಪರೇಷನ್ ಸಿಂಧೂರ ನಂತರ ಇಡೀ ಜಗತ್ತು ಭಾರತದ ಶಕ್ತಿಯನ್ನು ಮೆಚ್ಚಿಕೊಂಡಿದೆ ಎಂದು ಶ್ಲಾಘಿಸಿದರು.

Share This Article