ಹಿಂದೂಸ್ತಾನಿಗಳಾಗಿದ್ರೆ ಭಾರತ್ ಮಾತಾ ಕೀ ಜೈ ಅನ್ನಿ: ಸೋನಾಲಿ ಪೋಗಟ್

Public TV
2 Min Read

ಚಂಡೀಗಢ: ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಮತ್ಯಾಕೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ, ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಪೋಗಟ್ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ ಆದಂಪುರನಲ್ಲಿ ನಡೆದ ಸಮಾವೇಶದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಆದರೆ ವೇದಿಕೆಯ ಎಡಭಾಗದಲ್ಲಿದ್ದ ಕೆಲವರು ಜೋರಾಗಿ ಘೋಷಣೆ ಕೂಗಲಿಲ್ಲ. ಇದರಿಂದ ಕೋಪಗೊಂಡ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಅಥವಾ ಪಾಕಿಸ್ತಾನದವರಾ? ನೀವು ಹಿಂದೂಸ್ತಾನ್ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿ ಎಂದರು.

ಸೋನಾಲಿ ಪೋಗಟ್ ಮತ್ತೆ ಭಾರತ್ ಮಾತಾ ಕೀ ಘೋಷಣೆ ಕೂಗಿದರು. ಆಗಲೂ ವೇದಿಕೆ ಎಡಭಾಗದ ಜನರಿಂದ ಏರು ಧ್ವನಿಯಲ್ಲಿ ಘೋಷಣೆ ಕೇಳಿಬರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಸೋನಾಲಿ ಪೋಗಟ್, ನಾನು ನಿಮ್ಮ ಬಗ್ಗೆ ನಾಚಿಕೆ ಪಡುತ್ತೇನೆ. ಸಣ್ಣ ರಾಜಕೀಯದ ಕಾರಣಕ್ಕಾಗಿ ಭಾರತ್ ಮಾತಾ ಕೀ ಜೈ ಎಂದು ಹೇಳಲಾದ ನಿಮ್ಮಂತಹ ಭಾರತೀಯರಿದ್ದಾರೆ. ನಿಮ್ಮ ಮತಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದರು.

ಸೋನಾಲಿ ಪೋಗಟ್ ಕಾಂಗ್ರೆಸ್ ಪ್ರಾಬಲ್ಯದ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸೋನಾಲಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ವಿಡಿಯೋವನ್ನು ಟಿಕ್-ಟಾಕ್‍ನಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 1969ರಿಂದಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. 1969 ರಿಂದ ಕಾಂಗ್ರೆಸ್ ಮುಖಂಡ ಭಜನ್ ಲಾಲ್ ಎಂಟು ಬಾರಿ ಗೆಲುಸು ಸಾಧಿಸಿದ್ದರು. ನಂತರ ಭಜನ್ ಲಾಲ್ ಪತ್ನಿ ಜಸ್ಮಾ ದೇವಿ ಹಾಗೂ ಪುತ್ರ ಕುಲ್ದೀಪ್ ಬಿಶ್ನೋಯ್ ಕ್ರಮವಾಗಿ 1987 ಹಾಗೂ 1998ರಲ್ಲಿ ಗೆಲುವು ಕಂಡಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಹರ್ಯಾಣ ಜನಹಿತ ಪಕ್ಷವು (ಎಚ್‍ಜೆಪಿ) ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಎಚ್‍ಜೆಪಿ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿತು.

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಹೊರ ಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *