60 ವರ್ಷದಲ್ಲಿ 13 ಕೋಟಿ ಎಲ್‍ಪಿಜಿ, ಕಳೆದ ನಾಲ್ಕು ವರ್ಷದಲ್ಲಿ 11 ಕೋಟಿ ಕನೆಕ್ಷನ್: ಮೋದಿ

Public TV
2 Min Read

ನವದೆಹಲಿ: ಉಜ್ವಲ ಯೋಜನೆಯ ಮುಖಾಂತರ ನಮ್ಮ ಸರ್ಕಾರವು ಕಳೆದ 4 ವರ್ಷಗಳಲ್ಲಿ 11 ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ ಹಿಂದಿನ ಸರ್ಕಾರ 60 ವರ್ಷಗಳಲ್ಲಿ ಕೇವಲ 13 ಕೋಟಿ ಗ್ರಾಹಕರಿಗೆ ಮಾತ್ರ ಎಲ್‍ಪಿಜಿ ಸಂಪರ್ಕ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರದಂದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿಯವರು, ತಂತ್ರಜ್ಞಾನದ ಸಹಾಯದಿಂದ ದೇಶದ ಪ್ರತಿಯೊಬ್ಬರೊಂದಿಗೆ ಸಂಪರ್ಕ ಬೆಳೆಸಿ ಅವರಿಂದ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು.

ಈ ವೇಳೆ ಕಥೆ ಪ್ರೇಮ್‍ಚಂದ್‍ರವರು ರಚಿಸಿದ ಹಿಂದಿಯ ‘ಈದ್ಗಾ’ ಕಥೆಯಲ್ಲಿನ ಹಮೀದ್ ಎಂಬ ಬಾಲಕನ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಹಮೀದ್ ತಾಯಿ ರೊಟ್ಟಿಯನ್ನು ಸುಡುವಾಗ ತನ್ನ ಕೈಯನ್ನು ಸುಟ್ಟುಕೊಳ್ಳುತ್ತಿದ್ದರು. ಅಜ್ಜಿಯ ನೋವನ್ನು ಕಂಡು ಬಾಲಕ ಹಮೀದ್ ಅಂಗಡಿಯಲ್ಲಿ ಮಿಠಾಯಿಯನ್ನು ಖರೀದಿಸದೇ ಇಕ್ಕುಳಗಳನ್ನು ತಂದು ಕೊಟ್ಟು ಕೈ ಸುಡದಂತೆ ಮಾಡಿದ್ದ ಎಂದರು. ಈ ವೇಳೆ ಚಿಕ್ಕವರಿದ್ದಾಗ ತಮ್ಮ ತಾಯಿಯವರು ಹೊಗೆ ತುಂಬಿದ್ದ ಅಡುಗೆ ಕೋಣೆಯಲ್ಲಿ ಕಷ್ಟ ಪಡುತ್ತಿರುವುದನ್ನು ನೆನಪಿಸಿಕೊಂಡು ಭಾವುಕರಾದ ಮೋದಿ ಅಂದು ಎಲ್‍ಪಿಜಿ ಸಂಪರ್ಕವು ಕೇವಲ ಶ್ರೀಮಂತರು ಹಾಗೂ ಪ್ರತಿಷ್ಠೆಯ ರೂಪದಲ್ಲಿ ಜಾರಿಯಲ್ಲಿತ್ತು ಎಂದು ಹೇಳಿದರು.

ಈ ಹಿಂದೆ ಅಡುಗೆ ಮಾಡಲು ಸೀಮೆಎಣ್ಣೆ, ಕಟ್ಟಿಗೆ, ಬೆರಣಿ ಹಾಗೂ ಇನ್ನಿತರೆ ಕಚ್ಛಾವಸ್ತುಗಳನ್ನು ಬಳಸುತ್ತಿದ್ದರಿಂದ ಪರಿಸರ ಮಾಲಿನ್ಯ ಉಂಟಾಗುತಿತ್ತು. ಮಹಿಳೆಯರು ಕಟ್ಟಿಗೆಗಳನ್ನು ಸಂಗ್ರಹಿಸಲು ದಿನಗಟ್ಟಲೇ ಸಮಯ ಕಳೆಯುತ್ತಿದ್ದರು. ಈ ಯೋಜನೆಯಲ್ಲಿ ಮಹಿಳೆಯರು ಯಾವುದೇ ಮಾಲಿನ್ಯವಿಲ್ಲದೆ ಉತ್ತಮ ವಾತಾವರಣದಲ್ಲಿ ಕಡಿಮೆ ಅವಧಿಯಲ್ಲಿ ಅಡುಗೆ ಕೆಲಸವನ್ನು ಮುಗಿಸಿ, ಇತರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸಧೃಢರನ್ನಾಗುವಂತೆ ಮಾಡಿದೆ ಎಂದು ವಿವರಿಸಿದರು.

ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡುವಾಗ ಹಿಂದಿನ ಯುಪಿಯ ಸರ್ಕಾರವು 445 ಪೆಟ್ರೋಲ್ ಪಂಪ್‍ಗಳನ್ನು ದಲಿತರಿಗೆ ನೀಡಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ 1200 ಪೆಟ್ರೋಲ್ ಪಂಪ್‍ಗಳನ್ನು ದಲಿತ ಕುಟುಂಬದ ಸದಸ್ಯರಿಗೆ ನೀಡಿದ್ದೇವೆ. ಈ ಯೋಜನೆಯಲ್ಲಿ ಶೇ.45 ರಷ್ಟು ದಲಿತ ಮತ್ತು ಬಡಕುಟುಂಬದ ಒಟ್ಟು 1300 ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕವನ್ನು ನೀಡಿದ್ದೇವೆಂದು ತಿಳಿಸಿದರು.

2014ರ ತನಕ ಒಟ್ಟು 13 ಕೋಟಿ ಕುಟುಂಬಗಳು ಎಲ್‍ಪಿಜಿ ಸಂಪರ್ಕವನ್ನು ಹೊಂದಿತ್ತು. ಅಂದರೆ ಒಟ್ಟು 60 ವರ್ಷಗಳಲ್ಲಿ ಕೇವಲ 13 ಕೋಟಿ ಕುಟುಂಬಗಳು ಮಾತ್ರವೇ ಸಂಪರ್ಕವನ್ನು ಪಡೆದುಕೊಂಡಿದೆ. ಕೇವಲ ಶ್ರೀಮಂತ ಕುಟುಂಬಗಳಿಗೆ ಮಾತ್ರವೇ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ ಎಂದು ದೂರಿದರು.

 

 

Share This Article
Leave a Comment

Leave a Reply

Your email address will not be published. Required fields are marked *