ಜನಪದ ಶೈಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ – ಸಾಹಿತಿ ಶಂಭು ಬಳೆಗಾರ

Public TV
1 Min Read

ಕೊಪ್ಪಳ: ನಮ್ಮ ಗ್ರಾಮೀಣ ಸೊಗಡಿನ ಜನಪದ ಶೈಲಿಯು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಸಾಹಿತಿ ಡಾ. ಶಂಭು ಬಳೆಗಾರ ಅಭಿಪ್ರಾಯಪಟ್ಟರು.

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ 26ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಚಿಣ್ಣರ ಜನಪದ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿಯು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ. ನಮ್ಮ ಆಚಾರ ವಿಚಾರ, ಉಡುಗೆ ತೊಡುಗೆ, ಊಟ ಉಪಚಾರ ಸೇರಿದಂತೆ ಸಂಸ್ಕೃತಿಯನ್ನು ಬಿಂಬಿಸುವ ನಾನಾ ಬಗೆಯ ಕಾಯಕಗಳ ಶೈಲಿಗಳು ವಿಭಿನ್ನವಾಗಿ ಕಾಣುತ್ತದೆ. ಆದರೆ ಇಂದು ಆ ಜನಪದ ಶೈಲಿಯು ಮರೆಯಾಗುವ ಹಂತಕ್ಕೆ ತಲುಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇವಲ ಬೆರಳೆಣಿಕೆಯಷ್ಟು ಗ್ರಾಮೀಣ ಭಾಗಗಳಲ್ಲಿ ಮಾತ್ರ ನಾವು ಜನಪದ ಶೈಲಿಯನ್ನು ಕಾಣವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧುನಿಕತೆಗೆ ಮಾರು ಹೋಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಜನಪದ ಶೈಲಿ, ಜನಪದ ಕಲೆ ಮರೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಜನಪದದ ಬಗ್ಗೆ ತಿಳಿಸುವ ಉದ್ದೇಶದಿಂದ ಚಿಣ್ಣರ ಜನಪದ ಜಾತ್ರೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಗ್ರಾಮೀಣ ಭಾಗಗಳಿಂದ ದೇಶ ಬದಲಾವಣೆ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ನಾವು ಗ್ರಾಮೀಣ ಭಾಗದ ಶೈಲಿಯನ್ನು ಕಡೆಗಣಿಸುವಂತಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಜನಪದ ಶೈಲಿಯಲ್ಲಿ ತಾತ್ಕಾಲಿನ ಗ್ರಾಮಗಳನ್ನು ನಿರ್ಮಾಣ ಮಾಡಲಾಗಿತ್ತು. ಒಂದೊಂದು ಮನೆಯಲ್ಲಿ ಕೂಡ ಕಮ್ಮಾರರು, ನೇಕಾರರು, ಕುಂಬಾರರು ಸೇರಿದಂತೆ ನಾನಾ ರೀತಿಯ ಕಸುಬುಗಳ ಆಧಾರ ಮೇಲೆ ಮನೆಗಳನ್ನು ವಿಂಗಡಣೆ ಮಾಡಿ, ಯಾರು ಯಾವ ಕೆಲಸವನ್ನು ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಮಕ್ಕಳಿಗೆ ಪ್ರಯೋಗಿಕವಾಗಿ ನೀಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *