ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

Public TV
3 Min Read

ರಾಂಚಿ: ಡೊರಾಂಡಾ ಮೇವು ಹಗರಣದ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡಾ ದೋಷಿ ಎಂದು ಘೋಷಿಸಲಾಗಿದೆ. ಜಾರ್ಖಂಡ್ ರಾಜಧಾನಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಿದೆ.

ಪ್ರಕರಣದಲ್ಲಿ 36 ಮಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಮುಖ ಆರೋಪಿ ಲಾಲೂ ಪ್ರಸಾದ್ ಯಾದವ್ ಶಿಕ್ಷೆಯನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್ ಹೇಳಿದೆ. ನ್ಯಾಯಾಲಯವು ಲಾಲೂ ದೋಷಿ ಎಂದು ಘೋಷಿಸಿದ ಬೆನ್ನಲ್ಲೇ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸುವ ಬದಲು ರಿಮ್ಸ್‌ಗೆ ಕಳುಹಿಸುವಂತೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ

ಏನಿದು ಪ್ರಕರಣ?
ಈ ಪ್ರಕರಣವು ಡೊರಾಂಡಾ ಖಜಾನೆಯಿಂದ 139 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದೆ. 1990-92ರ ನಡುವೆ ಈ ಹಗರಣ ನಡೆದಿದ್ದು ಇದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ. ಹರಿಯಾಣ ಮತ್ತು ದೆಹಲಿಯಿಂದ ರಾಂಚಿಗೆ 400 ಗೂಳಿಗಳನ್ನು ತರಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಇದಕ್ಕೆ ಬಳಸಿದ ವಾಹನಗಳ ಸಂಖ್ಯೆಯನ್ನು ಅಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇದಕ್ಕೆ ಬಳಸಿದ ಬಹುತೇಕ ವಾಹನಗಳು ಮೋಟರ್ ಬೈಕ್‍ಗಳದಾಗಿತ್ತು. ಇಷ್ಟು ಮಾತ್ರವಲ್ಲದೇ ಬೈಕ್‍ಗಳ ನಂಬರ್ ನೀಡಿ, ಆ ವಾಹನಗಳ ಮೂಲಕ ಜಾನುವಾರುಗಳಿಗೆ ಮೇವು ತರಲಾಗಿದೆ ಎಂದು ತಿಳಿಸಲಾಗಿತ್ತು.

ಇದರ ತನಿಖೆ ನಡೆಸಿದ್ದ ಸಿಬಿಐ, ಇದೊಂದು ಬೃಹತ್ ಹಗರಣ ಎಂದು ಹೇಳಿತ್ತು. ರಾಜ್ಯ ಮುಖಂಡರು, ನೌಕರರು, ಉದ್ಯಮಿಗಳು ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಅಧಿಕಾರಿಗಳು, ಈ ಪ್ರಕರಣದಲ್ಲಿ ಬಿಹಾರದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿದಂತೆ ರಾಜ್ಯದ ಹಲವು ಸಚಿವರನ್ನು ಬಂಧಿಸಿತ್ತು. ಇದನ್ನೂ ಓದಿ: ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

ನಾಲ್ಕು ಪ್ರಕರಣಗಳಲ್ಲಿ ಲಾಲುಗೆ ಶಿಕ್ಷೆ
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಐದು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್‍ಗೆ ಇದುವರೆಗೆ ಶಿಕ್ಷೆಯಾಗಿದೆ. ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್‍ಗೆ ಜಾಮೀನು ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *