ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

Public TV
2 Min Read

ಚಿಕ್ಕಬಳ್ಳಾಪುರ: ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ ಚಿಕ್ಕಬಳ್ಳಾಪುರದ ಹೂ ಬೆಳೆಗಾರರಿಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳು ಸಂತಸ ತಂದಿದೆ. ಮದುವೆ-ಮುಂಜಿ, ಸಭೆ ಸಮಾರಂಭಗಳ ಸೇರಿದಂತೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಹೂ ಗಳಿಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಬಂದಿದೆ.

ಸಾಲ ಮಾಡಿದ್ದ ರೈತರಿಗೆ ಈಗ ಕೈ ತುಂಬಾ ಕಾಸು ಸಿಗುತ್ತಿದ್ದು, ಹೂ ಬೆಳೆಗಾರರು ಸಖತ್ ಖುಷಿ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬರದನಾಡಾದರೂ ಇಲ್ಲಿನ ರೈತರು ಹೂ ಹಣ್ಣು ತರಕಾರಿ ಬೆಳೆಯೋದರಲ್ಲಿ ಫೇಮಸ್. ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ ರೈತರಿಗೆ ಕೈ ತುಂಬಾ ಕಾಸು ನೋಡೋದು ಕಷ್ಟವಾಗಿತ್ತು. ಈ ಬಾರಿ ಚಿಕ್ಕಬಳ್ಳಾಪುರ ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಗ್ಲಾಡಿಯೋಲಸ್ ಬೆಳೆದಿದ್ದಾರೆ. ಈ ಗ್ಲಾಡಿಯೋಲಸ್ ಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಭಾರೀ ಬೇಡಿಕೆ ಬಂದಿದೆ.

ಈ ಗ್ಲಾಡಿಯೋಲಸ್ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ ದೆಹಲಿಗೂ ಸಹ ರವಾನೆ ಮಾಡಲಾಗುತ್ತಿದೆ. 5 ಹೂವಿನ ಒಂದು ಕಟ್ಟು 50 ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ಲಾಡಿಯೋಲಸ್ ಬೆಳೆದ ರೈತರು ಕೈ ತುಂಬಾ ಕಾಸು ಎಣಿಸುವಂತಾಗಿದೆ ಅಂತ ರೈತ ಗಂಗರಾಜು ಹಾಗೂ ಮಂಜುನಾಥ್ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

ಕೇವಲ ಗ್ಲಾಡಿಯೋಲಸ್ ಅಷ್ಟೇ ಅಲ್ಲದೆ ಅಲಂಕಾರಕ್ಕೆ ಅತಿ ಹೆಚ್ಚಾಗಿ ಬಳಸೋ ಜರ್ಬೇರಾವನ್ನ ಸಹ ಚಿಕ್ಕಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್ ಎಂಬವರು ಬೆಳೆದಿದ್ದು, ಈ ಜರ್ಬೇರಾಗೂ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಫಾಲಿ ಹೌಸ್ ನಲ್ಲಿ ಬೆಳೆದಿರೋ ಬಣ್ಣ ಬಣ್ಣದ ತರಹೇವಾರಿ ಜರ್ಬೇರಾ ಒಂದು ಹೂ 20 ರೂಪಾಯಿಗೆ ಬಿಕರಿಯಾಗುತ್ತಿದ್ದು, 10 ಹೂವಿನ ಕಟ್ಟು 200 ರೂಪಾಯಿಗೆ ಸೇಲ್ ಆಗುತ್ತಿದೆ. ಕೆಲ ವ್ಯಾಪಾರಸ್ಥರೇ ತೋಟಕ್ಕೆ ಭೇಟಿ ನೀಡಿ ಕೇಳಿದಷ್ಟು ಹಣ ನೀಡಿ ಹೂ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಸಾಲ ಸೋಲ ಮಾಡಿ ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಈಗ ಪ್ರತಿಫಲ ಸಿಕ್ತು ಅಂತ ರೈತ ವಿಜಯ್ ಕುಮಾರ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

ಗ್ಲಾಡಿಯೋಲಸ್ -ಜರ್ಬೇರಾ ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರದ ರೈತರು ಗುಲಾಬಿ, ಸೇವಂತಿಗೆ, ಚೆಂಡು ಹೂವನ್ನ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 1 ಕೆಜಿ ಗುಲಾಬಿ 120 ರಿಂದ 150 ರೂ.ಗೆ, ಸೇವಂತಿಗೆ 120 ರಿಂದ 160 ರೂ.ಗೂ ಹಾಗೂ ಚೆಂಡು ಹೂ ಸಹ 50-60 ರೂ.ಗಳಿಗೆ ಮಾರಾಟವಾಗ್ತಿದ್ದು ಹೂ ಬೆಳೆದ ರೈತರ ಜೇಬು ತುಂಬುವಂತಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್

Share This Article
Leave a Comment

Leave a Reply

Your email address will not be published. Required fields are marked *