10 ವರ್ಷದ ಹಿಂದೆ ಸೈಕಲೂ ಇರ್ಲಿಲ್ಲ, ಈಗ ಕೋಟಿಗಳ ಒಡೆಯ – ಭಕ್ತನಿಂದ ದೇವಸ್ಥಾನ ಪುಷ್ಪಮಯ

Public TV
2 Min Read

ಉಡುಪಿ: ಕಷ್ಟ ಬಂದಾಗ ದೇವರಿಗೆ ವಿಧವಿಧದ ಹರಕೆ ಹೋರುತ್ತಾರೆ. ಆದರೆ ಇಲ್ಲೊಬ್ಬ ಭಕ್ತ ಪ್ರತಿವರ್ಷ ಇಡೀ ದೇವಸ್ಥಾನವನ್ನೇ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ತನ್ನ ಹರಕೆಯನ್ನು ಪೂರೈಸುತ್ತಿದ್ದಾರೆ.

ರಮೇಶ್ ಬಾಬು ಹೂವಿನಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ಇವರು ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲ್ ಕೂಡ ಇರಲಿಲ್ಲ. ಆದರೆ ಇಂದು ಇವರು ಕೋಟಿಗಳ ಒಡೆಯರಾಗಿದ್ದಾರೆ. ಹೀಗಾಗಿ ರಮೇಶ್ ತಮ್ಮ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದುಕೊಂಡು ಪೂಜೆ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್, ಕಳೆದ ಮೂರು ವರ್ಷದಿಂದ ಆಷಾಢದ ಶುಕ್ರವಾರದಂದು ಜನಾರ್ದನ- ಮಹಾಕಾಳಿ ದೇವಾಲಯದಲ್ಲಿ ನಿರಂತರವಾಗಿ ಅಮ್ಮನವರಿಗೆ ಹೂವಿನ ಅಲಂಕಾರ ಮಾಡಿಕೊಂಡು ಬರುತ್ತಿದ್ದೇನೆ. ಹೀಗಾಗಿ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ. ಈ ರೀತಿಯ ಹರಕೆ ನೀಡುತ್ತಿರುವುದು ಆರನೇ ಬಾರಿಯಾಗಿದೆ ಎಂದು ಹೇಳಿದ್ದಾರೆ.

ಹೂವಿನ ಅಲಂಕಾರ ಸಂಕಲ್ಪ ಏಕೆ?
ಒಮ್ಮೆ ಈ ತಾಯಿಯ ಸನ್ನಿಧಾನಕ್ಕೆ ಬಂದಾಗ ನಮ್ಮ ಊರಿನ ರೀತಿಯಲ್ಲಿ ಈ ತಾಯಿಗೂ ಏಕೆ ಹೂವಿನ ಅಲಂಕಾರ ಮಾಡಬಾರದು ಎಂದು ನಮ್ಮ ತಂಡದವರ ಜೊತೆ ಮಾತನಾಡಿದೆ. ಆಗ ಅವರು ಕೂಡ ಖುಷಿಯಿಂದ ಒಪ್ಪಿಕೊಂಡಿದ್ದರು. ಹೀಗಾಗಿ ಎಲ್ಲರೂ ಇಲ್ಲಿಗೆ ಬಂದು ಹೂವಿನ ಅಲಂಕಾರ ಮಾಡುತ್ತಿದ್ದೇವೆ. ಪ್ರತಿಬಾರಿ ಹೂವಿನ ಅಲಂಕಾರ ಮಾಡಿ ಹೋದಾಗೆಲ್ಲಾ ನಾವು ಹಂತಹಂತವಾಗಿ ಬೆಳೆಯುತ್ತಾ ಹೋದೆವು. ಇಂದು ನಾನು ಚಿಕ್ಕಬಳ್ಳಾಪುರದಲ್ಲಿ ನಗರಸಭಾ ಸದಸ್ಯನಾಗಿದ್ದೇನೆ. ನಾನು ಸಾಮಾನ್ಯ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೆ. ಆದರೆ ಇಂದು ನನಗೆ ಒಂದು ಸ್ಥಾನ ಸಿಕ್ಕಿದೆ ಅಂದರೆ ಅದಕ್ಕೆ ಈ ತಾಯಿಯೇ ಕಾರಣ. ಹೀಗಾಗಿ ನನ್ನ ಉಸಿರಿರುವ ತನಕ ಪ್ರತಿವರ್ಷ ಬಂದು ಹೂವಿನ ಅಲಂಕಾರ ಮಾಡುತ್ತೇನೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್, ಉಡುಪಿಗೆ ಬಂದಿದ್ದಾರೆ. ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತಂದಿದ್ದು, ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡಿದ್ದಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸಿದ್ದಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಾಲಯವಾಗಿ ಇಂದು ಪರಿವರ್ತನೆಗೊಂಡಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಶುಕ್ರವಾರದಿಂದ ಮೂರು ದಿನ ಈ ಅಲಂಕಾರ ಇರುತ್ತದೆ. ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. ಈ ಮೂಲಕ ವಿಭಿನ್ನ ಹರಕೆಯನ್ನು ದೇವರಿಗೆ ಅರ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *