ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!

Public TV
2 Min Read
– ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್

ಮೊದಲು ಈ ಫೋಟೋದಲ್ಲಿ ಕಾಣುತ್ತಿರುವ ಸೀರೆಯ ಕಥೆ ಹೇಳಿಬಿಡ್ತೀನಿ. ನಿನ್ನೆ (ಮೇ 21) ಕೆ.ಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ (KR Circle Underpass) ನೀರು ತುಂಬಿ ಕಾರಿನಲ್ಲಿ ಮುಳುಗಿದ್ದ ಕುಟುಂಬದವರು ಸಹಾಯಕ್ಕಾಗಿ ಅರಚಾಡುತ್ತಿದ್ರು. ಲೋಕಾಯುಕ್ತ ಕಚೇರಿಯ ಬಳಿ ಇದ್ದ ರಿಪೋರ್ಟರ್ ನಾಗೇಶ್ ಅರಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸುತ್ತಾರೆ. ಅವರ ಜೊತೆಗಿದ್ದ ʻಪಬ್ಲಿಕ್ ಟಿವಿʼ (Public Tv) ಕ್ಯಾಬ್ ಚಾಲಕ ವಿಜಯ್ (Public Hero Vijay) ಈಜು ಬರುತ್ತಿದ್ರಿಂದ ಹಿಂದೆ-ಮುಂದೆ ಯೋಚಿಸದೇ ನೀರಿನೊಳಗೆ ದುಮುಕಿ ಅಲ್ಲಿದ್ದವರ ರಕ್ಷಣೆಗೆ ಮುಂದಾಗುತ್ತಾರೆ.

ನಾಗೇಶ್ (Public Hero Nagesh) ರಸ್ತೆಯಲ್ಲಿ ಹೋಗೋ ಬರೋರನ್ನೇಲ್ಲಾ ನಿಲ್ಲಿಸಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ತಾ ಇರ್ತಾರೆ. ಅಷ್ಟರಲ್ಲಿ ನಾಗೇಶ್ ಕಣ್ಣಮುಂದೆ ದೇವತೆ ಕಾಣಿಸಿದ್ದಾರೆ. ಅಂಡರ್ ಪಾಸ್‌ನ ಹೊರಗೆ ನಿಂತಿದ್ದ ಮಹಿಳೆ ಈ ಅರಚಾಟ, ಒದ್ದಾಟ ನೋಡಿ ಕ್ಷಣಕಾಲ ಯೋಚಿಸದೇ ತಾನು ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ರಂತೆ. ಇದನ್ನು ಇಲ್ಲೇ ಕಂಬಕ್ಕೆ ಕಟ್ಟಿ ಕೆಳಗೆ ಇದ್ದವರಿಗೆ ಕೊಡಿ.. ಸೀರೆ ಹಿಡ್ಕೊಂಡು ಮೇಲೆ ಬರಲಿ ಅಂದುಬಿಟ್ರಂತೆ. ನಾಗೇಶ್‌ಗೆ ಮಾತೇ ಬಾರದ ಸ್ಥಿತಿ. ಇನ್ನು ಸೀರೆ ಬಿಚ್ಚಿಕೊಟ್ಟ ಮಹಿಳೆಯನ್ನು ನೋಡಿ ಅಲ್ಲೆ ಇದ್ದ ಇನ್ನುಳಿದ ಮಹಿಳೆಯರು ದುಪ್ಪಟ್ಟಾವನ್ನು ಕೊಟ್ಟಿದ್ದಾರೆ. ಅಷ್ಟರಲ್ಲಿ ಕ್ವಿಕ್ ರೆಸ್ಕ್ಯೂ ಟೀಮ್ ವಾಹನ ರಸ್ತೆಯಲ್ಲಿ ಪಾಸ್ ಆಗ್ತಿರೋದನ್ನು ನೋಡಿದ ನಾಗೇಶ್ ತಕ್ಷಣ ಅವರಿಗೆ ಮನವಿ ಮಾಡಿಕೊಂಡು ಸ್ಥಳಕ್ಕೆ ಕರೆಸಿದ್ದಾರೆ.

ಆ ಸೀರೆ ಬಿಚ್ಚಿ ಕೊಟ್ಟ ಮಹಿಳೆಗೆ ಪಕ್ಕದಲ್ಲಿಯೇ ನಿಂತ ವ್ಯಕ್ತಿಯೋರ್ವ ಶರ್ಟು ಬಿಚ್ಚಿ ಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿ ಕಳಿಸಿದ್ದಾರೆ. ಆ ಮಹಾ ತಾಯಿ ಯಾರೂ ಅನ್ನೋದೇ ಗೊತ್ತಾಗಲಿಲ್ಲ. ಆದ್ರೇ ಆಕೆಯ ಸೀರೆ ಅಲ್ಲಿದ್ದ ಜೀವಗಳನ್ನು ಕಾಪಾಡಿದೆ. ಇನ್ನು ವಿಜಯ್ ಕಾರಿನೊಳಗೆ ಇದ್ದ ನಾಲ್ವರನ್ನು ಹೇಗೋ ಎತ್ತಿ ಕಾರಿನ ಮೇಲೆ ಕೂರಿಸಿ ಜೀವವನ್ನು ಉಳಿಸಿದ್ದಾರೆ.

ಇನ್ನೋರ್ವ ಯುವತಿಯನ್ನು ಎಳೆಯುವಾಗ ಆಕೆ ಸೀಟಿನ ಮಧ್ಯ ಭಾಗಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ತುಂಬಾ ಹೊತ್ತು ಒದ್ದಾಡಿದ ವಿಜಯ್ ಕಷ್ಟ ಪಟ್ಟು ಆಕೆಯನ್ನು ಮೇಲೆತ್ತಿ ರೆಸ್ಕ್ಯೂ ಟೀಮ್ ಗೆ ಒಪ್ಪಿಸಿದ್ದಾರೆ. ಆದ್ರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗಿದೆ. ಅಲ್ಲೂ ಕೂಡ ನಮ್ಮ ವರದಿಗಾರ ಲೋಕೇಶ್ ಸೇರಿದಂತೆ ಬೇರೆ ಚಾನೆಲ್‌ನವರು ಗಲಾಟೆ ಮಾಡಿದ ಮೇಲೆ ಟ್ರೀಟ್‌ಮೆಂಟ್‌ ಶುರುಮಾಡಿದ್ದಾರೆ. ಅಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ವಿಜಯ್, ನಾಗೇಶ್ ಕಣ್ಣಲ್ಲಿ ನಾಲ್ವರನ್ನು ಉಳಿಸಿದ ಸಂಭ್ರಮಕ್ಕಿಂತ ಆ ಯುವತಿಯ ಪ್ರಾಣ ಉಳಿಸಿಕೊಳ್ಳೋಕೆ ಆಗಿಲ್ಲವಲ್ಲ ಅಂತಾ ಅದ ನೋವೆ ಹೆಚ್ಚಿತ್ತು. ಜೀವ ಪಣಕ್ಕಿಟ್ಟು ಬೇರೆಯವರ ಬದುಕು ಉಳಿಸಲು ವಿಜಯ್ ಸಾಹಸ, ಸಾರ್ವಜನಿಕ ಸ್ಥಳದಲ್ಲಿ ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟ ಮಹಾತಾಯಿ ಇವರನ್ನೆಲ್ಲ ನೋಡುವಾಗ ನಮ್ಮ ನಡುವೆ ಅದೆಂಥ ಅದ್ಭುತ ಗುಣವಿರುವ ಮನುಷ್ಯರು ಇರುತ್ತಾರಲ್ಲ ಅಂತಾ ಅನಿಸುತ್ತಿದೆ.

Share This Article