ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು

Public TV
2 Min Read

ಚಿಕ್ಕಮಗಳೂರು: ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಟುಂಬವೊಂದು ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರಿ ಶಾಲೆಯಲ್ಲೇ ವಾಸ ಮಾಡುತ್ತಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾತ್ಕಾಲಿಕವಾಗಿ ಇಲ್ಲಿ ಇರಿ, ಸೂಕ್ತ ಸೂರು ಒದಗಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು ಮತ್ತೆ ಇತ್ತ ತಲೆ ಹಾಕಲೇ ಇಲ್ಲ. ಅಧಿಕಾರಿಗಳು ಇಂದು ಬರುತ್ತಾರೆ, ನಾಳೆ ಬರುತ್ತಾರೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿರೋ ಕುಟುಂಬ ಇಂದಿಗೂ ಸರ್ಕಾರಿ ಶಾಲೆಯಲ್ಲಿಯೇ ವಾಸ ಮಾಡುತ್ತಿದೆ. ನಾಲ್ಕು ಗೋಡೆ ಮಧ್ಯೆಯೇ ಅಡುಗೆ, ಊಟ-ತಿಂಡಿ, ವಾಸ, ನಿದ್ರೆ ಮಾಡುತ್ತಾರೆ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯವನ್ನ ಕೇಳೋದೇ ಬೇಡ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿತನಕ್ಕೆ ಈ ಕುಟುಂಬ ನಿರ್ಗತಿಕರಂತೆ ಬದುಕುವಂತಾಗಿದೆ.

2019 ಅಲ್ಲ. 2018ರ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಮಲೆನಾಡಲ್ಲಿ ವರುಣನ ಅಬ್ಬರ ಹೇಳತೀರದ್ದಾಗಿತ್ತು. ಆಗ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಗಳಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿಗರ್ಡಿ ಗ್ರಾಮದ ರಾಘವೇಂದ್ರ ಭಟ್ ಹಾಗೂ ಶಾಂಭವಿ ದಂಪತಿಯ ಮನೆ ಮಳೆಗೆ ಆಹುತಿಯಾಗಿತ್ತು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಜಯಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಾತ್ಕಾಲಿಕವಾಗಿ ಇಲ್ಲಿರಿ ಎಂದು ಐದು ವರ್ಷಗಳ ಹಿಂದೆಯೇ ಮುಚ್ಚಿದ ಶಾಲೆಗೆ ತಂದು ಕುಟುಂಬವನ್ನು ಬಿಟ್ಟಿದ್ದರು. ಬಿಟ್ಟು ಹೋದವರು ಮತ್ತೆ ಈ ಕಡೆ ಬಂದೇ ಇಲ್ಲ. ಈ ಕುಟುಂಬ ಮನೆಯ ಎಲ್ಲಾ ಸಾಮಾಗ್ರಿಗಳನ್ನ ಶಾಲೆಯ ಮುಂಭಾಗ ಜೋಡಿಸಿಕೊಂಡು ಒಂದು ಕೊಠಡಿಯಲ್ಲೇ ವಾಸ ಮಾಡುತ್ತಿದೆ. ಆಗೊಮ್ಮೆ-ಈಗೊಮ್ಮೆ ಬರೋ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ನಾಳೆ, ನಾಡಿದ್ದು ಅಂತ ನೆಪ ಹೇಳ್ತಿದ್ದಾರೆಯೇ ವಿನಃ ನೊಂದ ಕುಟುಂಬದ ನೆರವಿಗೆ ನಿಂತಿಲ್ಲ.

2019ರ ಲೋಕಸಭೆ ಚುನಾವಣೆ ವೇಳೆ ಇದೇ ಶಾಲೆ ಮತದಾನದ ಕೇಂದ್ರವಾಗಿತ್ತು. ಆಗ ಈ ಕುಟುಂಬದವರು ಎರಡು ದಿನಗಳ ಕಾಲ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದರು. ಬೂತ್ ವೀಕ್ಷಣೆಗೆ ಬಂದಿದ್ದ ತಹಶೀಲ್ದಾರ್, ನಿಮಗೆ ಇನ್ನೂ ಮನೆ ಕೊಟ್ಟಿಲ್ಲವಾ ಎಂದು ಕೇಳಿದ್ದರು. ಬಳಿಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಯವರಿಗೆ ಈ ಕುಟುಂಬಕ್ಕೆ ಬೇಗ ಮನೆ ಕಟ್ಟಿಕೊಡಿ ಎಂದು ಹೋಗಿದ್ದರು. ಆದರೆ ಇವರ ನೆರವಿಗೆ ಯಾರೂ ಬರಲೇ ಇಲ್ಲ. ಶಾಲೆ ಮುಚ್ಚಿದೆ. ಇರೋಕೆ ಸೂರಿಲ್ಲ ಎಂದು ಮಗನನ್ನ ಹಾಸ್ಟೆಲ್‍ನಲ್ಲಿ ಬಿಟ್ಟು ಈ ದಂಪತಿ ಶಾಲಾ ಕೊಠಡಿಯಲ್ಲಿ ವಾಸವಿದ್ದಾರೆ. 2019ರಲ್ಲಿ ಮಳೆಯಿಂದ ನೆಲೆ ಕಳೆದುಕೊಂಡವರಿಗೆ ಅಲ್ಪ-ಸ್ವಲ್ಪ ಪರಿಹಾರ ಬಂದಿದೆ. ಆದರೆ 2018ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಒಂದು ಆಶ್ರಯ ಯೋಜನೆ ಮನೆ ಕೂಡ ಕೊಟ್ಟಿಲ್ಲ ಅಂದರೆ ಇದು ವಿಪರ್ಯಸವೋ-ದುರಂತವೋ ದೇವರೇ ಬಲ್ಲ.

ಇವರ ಮನೆ ಅರ್ಥಾತ್ ಶಾಲಾ ಕೊಠಡಿಗೆ ಶಾಸಕರಂತೂ ಬಂದೇ ಇಲ್ಲ. ಅಧಿಕಾರಿಗಳು ಬಂದಿಲ್ಲ. ಆಗೊಬ್ಬರು-ಈಗೊಬ್ಬರು ಬಂದರೂ ಯಾವುದೇ ಪ್ರಯೋಜನವಿಲ್ಲ. ಇರೋದು ಒಂದು ಎಕ್ರೆ ತೋಟ ಅದು ಹಳದಿ ಎಲೆ ರೋಗಕ್ಕೆ ಬಲಿಯಾಗಿ ಈ ಕುಟುಂಬದ ಬದುಕೇ ನಶ್ವರವಾಗಿದೆ. ತೋಟದಲ್ಲಿ ಫಸಲಿಲ್ಲ. ಇರೋಕೆ ಮನೆ ಇಲ್ಲ. ಈ ಮುಗ್ಧ ಜನಕ್ಕೆ ಪ್ರಶ್ನಿಸೋದು ಗೊತ್ತಿಲ್ಲ. ಆಕ್ರೋಶ ವ್ಯಕ್ತಪಡಿಸೋಕು ಬರಲ್ಲ. ಪರಿಹಾರ ಕೊಡುತ್ತಾರೆ ಎಂದು ಒಂದೂವರೆ ವರ್ಷದಿಂದ ಶಾಲೆಯಲ್ಲಿ ಬದುಕುತ್ತಿದ್ದಾರೆ. ಇವರ ಮುಗ್ಧತೆಯನ್ನೇ ಬಂಡವಾಳ ಮಾಡ್ಕೊಂಡಿರೋ ಅಧಿಕಾರಿಗಳು ಇತ್ತ ತಲೆ ಹಾಕದಿರೋದು ಮಾತ್ರ ಅರ್ಥರಹಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *