ಮನಾಲಿ | ಬಿಯಾಸ್ ನದಿಯ ರೌದ್ರನರ್ತನ – ನೋಡನೋಡುತ್ತಲೇ ಕೊಚ್ಚಿಹೋದ ಕಟ್ಟಡ, ರಸ್ತೆಗಳು

Public TV
1 Min Read

– ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮುನ್ಸೂಚನೆ

ಶಿಮ್ಲಾ: ಭಾರೀ ಮಳೆಯಿಂದ ಹಿಮಾಚಲ ಪ್ರದೇಶದ ಮನಾಲಿಯಲ್ಲಿ (Manali) ಬಿಯಾಸ್ ನದಿ (Beas River) ಉಕ್ಕಿ ಹರಿಯುತ್ತಿದ್ದು, ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹದ ಅಲೆಗಳಿಗೆ ಕಟ್ಟಡಗಳು, ಅಂಗಡಿ ಹಾಗೂ ರಸ್ತೆಗಳು ನೋಡನೋಡುತ್ತಿದ್ದಂತೆ ಕೊಚ್ಚಿ ಹೋಗಿವೆ.

ಬಹಾಂಗ್‌ನಲ್ಲಿ ಎರಡು ಅಂತಸ್ತಿನ ಕಟ್ಟಡವು ಪ್ರವಾಹದ ನೀರಿನಿಂದ ಕೊಚ್ಚಿ ಹೋಗಿದ್ದು, ಎರಡು ರೆಸ್ಟೋರೆಂಟ್‌ಗಳು ಮತ್ತು ಎರಡು ಅಂಗಡಿಗಳು ಕುಸಿದು ಬಿದ್ದಿವೆ. ಇಲ್ಲಿನ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆ ಸಂಪರ್ಕವಿಲ್ಲದೇ ಜನರು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ವನ್‍ತಾರಾ ಪ್ರಾಣಿ ಸಂರಕ್ಷಣಾ ಕೇಂದ್ರದ ವಿರುದ್ಧ ಎಸ್‍ಐಟಿ ತನಿಖೆಗೆ ಸುಪ್ರೀಂ ಆದೇಶ

ಬಿಯಾಸ್ ನದಿ ನೀರು ಪಟ್ಲಿಕುಹಾಲ್, ಘನ್ವಿ ಖುಡ್ ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಮನೆಯಲ್ಲಿದ್ದ ಪಾತ್ರೆ-ಪಗಡಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನೀರಿನ ಸೆಳೆತಕ್ಕೆ ಹಲವು ರಸ್ತೆಗಳೇ ಕುಸಿದಿವೆ.

ಪ್ರವಾಹದ ತೀವ್ರತೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಂಪೂರ್ಣ ಜಲಾವೃತವಾದ ಸೇತುವೆಯೊಂದರಲ್ಲಿ ಚಾಲಕನೋರ್ವ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ. ನೀರಿನ ಸೆಳೆತಕ್ಕೆ ಸಿಲುಕಿ ಟ್ರಕ್ ಕೊಚ್ಚಿ ಹೋಗಿದ್ದು, ನೋಡುತ್ತಿದ್ದಂತೆ ನಾಮಾವಶೇಷವಾಗಿರುವ ದೃಶ್ಯವು ಎದೆ ಝಲ್ಲೆನಿಸುತ್ತದೆ. ಇದನ್ನೂ ಓದಿ: ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ; ಐವರು ಸಾವು – ಯಾತ್ರೆ ಸ್ಥಗಿತ

ಪ್ರವಾಹದ ಸೆಳೆತಕ್ಕೆ ಕುಲ್ಲು ಮತ್ತು ಮನಾಲಿ ನಡುವಿನ ಹೆದ್ದಾರಿಯ ಭಾಗಗಳು ಕೊಚ್ಚಿಹೋಗಿವೆ. ಇದೀಗ ಲೇಹ್-ಮನಾಲಿ ಹೆದ್ದಾರಿಯ ರಸ್ತೆ ಸಂಪರ್ಕವು ಸ್ಥಗಿತಗೊಂಡಿದೆ. ಸದ್ಯ ಯಾವುದೇ ಸಾವುನೋವಿನ ವರದಿಯಾಗಿಲ್ಲ.

ಹಿಮಾಚಲದಲ್ಲಿ ಭಾರೀ ಮಳೆಯ ಎಚ್ಚರಿಕೆ
ಕಿನ್ನೌರ್ ಜಿಲ್ಲೆಯ ಕನ್ವಿ ಗ್ರಾಮದಲ್ಲಿಯೂ ಹಠಾತ್ ಪ್ರವಾಹ ಸಂಭವಿಸಿದ ವರದಿಯಾಗಿದೆ. ಕಾಂಗ್ರಾ, ಚಂಬಾ ಮತ್ತು ಲಹೌಲ್-ಸ್ಪಿಟಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.

Share This Article