ಪ್ರವಾಹ ಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1,500 ಕೋಟಿ ರೂ. ಬಿಡುಗಡೆ

Public TV
1 Min Read

ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ 103 ತಾಲೂಕುಗಳಲ್ಲಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 1,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ 6,021 ಗ್ರಾ.ಪಂಚಾಯತ್‍ಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲಾಗುವುದು. 1,281 ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹ ಮತ್ತು ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಶಾಸಕ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿಗಳು ಸಹಜ, ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಸಮರ್ಥಿಸಿಕೊಂಡರು.

ಯತ್ನಾಳ್ ಹೇಳಿದ್ದೇನು?
ಮಂಗಳವಾರ ವಿಜಯಪುರದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳ ಜೊತೆ ಮಾತನಾಡುತ್ತಾ, ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದೆ ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲದೇ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *