ಪಂಚರಾಜ್ಯಗಳ ಸೋಲು ಕಾಂಗ್ರೆಸ್‍ಗೆ ಬದಲಾವಣೆ ಆಗೋದಕ್ಕೆ ಪಾಠ: ಸತೀಶ್ ಜಾರಕಿಹೊಳಿ

Public TV
1 Min Read

ಬೆಳಗಾವಿ: ಕಾಂಗ್ರೆಸ್‍ನವರಿಗೆ ಬದಲಾವಣೆ ಆಗೋದಕ್ಕೆ ಮತ್ತು ಸಂಘಟನೆ ಬಲಗೊಳಿಸಲು ಇದೊಂದು ಸೋಲು ಪಾಠವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಡೆ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅದು ಅವರು ಕಾಣುತ್ತಿರುವ ಹಗಲು ಕನಸು. ಎಂದೆಂದಿಗೂ ಕಾಂಗ್ರೆಸ್ ಮುಕ್ತ ಮಾಡಲು ಅವರಿಂದ ಸಾಧ್ಯವಿಲ್ಲ. ಗೋವಾದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಗಿದೆ ವಿನಃ ದೊಡ್ಡ ಮಟ್ಟದಲ್ಲಿ ನಾವೇನು ಸೋತಿಲ್ಲ ಎಂದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

ಗೋವಾದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಾವು ಸೋತಿದ್ದೇವೆ. ಗೋವಾದಲ್ಲಿ ನಮ್ಮ ವೋಟ್ ಬ್ಯಾಂಕ್ ಶೇ.32ರಷ್ಟಿದ್ದು, ಅದರಲ್ಲಿ ಕೇವಲ ಶೇ.2ರಷ್ಟು ಮಾತ್ರ ಕಡಿಮೆಯಾಗಿದೆ ಹೊರತು ಅಷ್ಟು ದೊಡ್ಡಮಟ್ಟದಲ್ಲಿ ವೋಟ್ ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 17 ರಾಜ್ಯಗಳಲ್ಲಿ ಬಿಜೆಪಿ, 2 ಕಡೆ ಕಾಂಗ್ರೆಸ್ – ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ? 

ಕರ್ನಾಟಕದಲ್ಲಿ ವಿಭಿನ್ನ ಚುನಾವಣೆ:
ನಮ್ಮ ರಾಜ್ಯದಲ್ಲಿ ಪಕ್ಷದ ಮೇಲೆ ಚುನಾವಣೆ ಮಾಡಲಾಗುತ್ತೆ ಹೊರತು ನಾಯಕತ್ವದ ಮೇಲಲ್ಲ, ನಮ್ಮದು ಪಕ್ಷಾಧಾರಿತ. ಬೇರೆ ರಾಜ್ಯಗಳ ಫಲಿತಾಂಶ ನಮ್ಮ ರಾಜ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ವಿಭಿನ್ನ ಚುನಾವಣೆ ನಡೆಯುತ್ತದೆ. ಬಿಜೆಪಿಯವರು ಒಮ್ಮೆಲೆ ಮೇಲೆ ಬಂದಿಲ್ಲ. ಅವರು ಸಹ 100 ವರ್ಷಗಳನ್ನು ಹಂತ ಹಂತವಾಗಿ ಕಳೆದ ನಂತರ ಅಧಿಕಾರಕ್ಕೆ ಬಂದಿದ್ದಾರೆ. ನಮಗೆ ಈಗ ಸೋಲಾಗಿರಬಹುದು. ಮತ್ತೆ ನಾವು ಹಂತ, ಹಂತವಾಗಿ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತೇವೆ. ಬಿಜೆಪಿ ದೇಶದಲ್ಲಿರುವ ಜನರಿಗೆ ಸುಳ್ಳುಗಳನ್ನು ಹೇಳುತ್ತಾ ಅಧಿಕಾರಿಕ್ಕೆ ಬಂದಿದ್ದಾರೆ. ಆದರೆ ನಮ್ಮ ಪಕ್ಷ ಸತ್ಯ ಹೇಳಿ ಬರುವ ಚುನಾವಣೆಗಳಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಲಾಗುವುದು ಎಂದು ನುಡಿದರು.

 

Share This Article
Leave a Comment

Leave a Reply

Your email address will not be published. Required fields are marked *