ಧರ್ಮಸ್ಥಳ: ಧರ್ಮಸ್ಥಳದ (Dharmasthala) ಬಂಗ್ಲೆಗುಡ್ಡ (Banglegudde) ರಹಸ್ಯ ಬೇಧಿಸಲು ಹೊರಟ ಎಸ್‌ಐಟಿ (SIT) ಇಂದು ಎರಡನೇ ದಿನದ ಶೋಧ ಕಾರ್ಯ ನಡೆಸಿದೆ. ಬುಧವಾರ ಶೋಧ ನಡೆಸಿದ ವೇಳೆ ಐದು ತಲೆ ಬುರುಡೆ ಸೇರಿ ನೂರಾರು ಮೂಳೆಗಳು ಸಿಕ್ಕಿದ್ದು ಅದೆಲ್ಲವೂ ಪುರುಷರದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದಲ್ಲಿ ತಲೆ ಬುರುಡೆ ತಂದಿದ್ದ ಸೌಜನ್ಯಳ ಮಾವ ವಿಠಲ ಗೌಡನನ್ನು ಎರಡು ಬಾರಿ ಬಂಗ್ಲೆಗುಡ್ಡಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು ಮಹಜರು ನಡೆಸಿದ್ದರು. ಮಹಜರು ನಡೆದ ಬಳಿಕ ವಿಠಲ ಗೌಡ ಬಂಗ್ಲೆಗುಡ್ಡದಲ್ಲಿ ಹತ್ತಾರು ಅಸ್ಥಿಪಂಜರಗಳನ್ನ ನೋಡಿದ್ದೇನೆಂದು ವೀಡಿಯೋ ಮಾಡಿ ಹೇಳಿಕೆ ನೀಡಿದ್ದ. ಇದಾದ ಬಳಿಕ ಬಂಗ್ಲೆಗುಡ್ಡದಲ್ಲಿ ಏನೋ ರಹಸ್ಯ ಅಡಗಿದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಈ ರಹಸ್ಯ ಬೇಧಿಸಲು ನಿರ್ಧರಿಸಿದ ಎಸ್‌ಐಟಿ 13 ಎಕರೆ ವಿಸ್ತೀರ್ಣದಲ್ಲಿರುವ ಇಡೀ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸರ್ಚ್ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಬುಧವಾರ ದಿನಪೂರ್ತಿ ಶೋಧ ನಡೆಸಿದ್ದ ವೇಳೆ ಐದು ಕಡೆಗಳಲ್ಲಿ ಭೂಮಿಯ ಮೇಲ್ಭಾಗದಲ್ಲಿ ಹರಡಿಕೊಂಡಿದ್ದ ಐದು ತಲೆ ಬುರುಡೆ ಹಾಗೂ ನೂರಕ್ಕೂ ಅಧಿಕ ಮೂಳೆಗಳು ಪತ್ತೆಯಾಗಿದೆ. ಎಲ್ಲವನ್ನು ವಶಕ್ಕೆ ಪಡೆದು ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು ಎಲ್ಲವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು
ಮಹಜರು ವೇಳೆ ಸ್ಥಳದಲ್ಲಿದ್ದ ತಜ್ಞ ವೈದ್ಯರು ಎಲ್ಲವೂ ಪುರುಷರ ತಲೆ ಬುರುಡೆ ಹಾಗೂ ಮೂಳೆಗಳು ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಅದೇ ಸ್ಥಳದ ಮರವೊಂದರಲ್ಲಿ ಎರಡು ಹಗ್ಗ ಒಂದು ಸೀರೆ ನೇತಾಡುವ ಸ್ಥಿತಿಯಲ್ಲಿದ್ದು ಅದರ ಅಡಿಭಾಗದ ಭೂಮಿಯ ಮೇಲ್ಭಾಗದಲ್ಲೇ ಕಳೇಬರ ಪತ್ತೆಯಾಗಿದೆ. ಹೀಗಾಗಿ ಇದು ಆತ್ಮಹತ್ಯೆ ಮಾಡಿಕೊಂಡವರ ಕಳೇಬರ ಎಂದು ಎಸ್‌ಐಟಿ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ
ಸೌಜನ್ಯಳ ಮಾವ ವಿಠಲ ಗೌಡ ತಲೆ ಬುರುಡೆ ತಂದ ಹಿನ್ನೆಲೆಯಲ್ಲಿ ಮಹಜರು ನಡೆಸಿದ್ದರಿಂದ ಬಂಗ್ಲೆಗುಡ್ಡ ಅರಣ್ಯದಲ್ಲಿ ಈ ಅಸ್ಥಿಪಂಜರಗಳೂ ಸಿಕ್ಕಿದೆ. ಈ ನಡುವೆ ಇದೇ ವಿಠಲ ಗೌಡ ವಿರುದ್ಧ ಎಸ್‌ಐಟಿಯಲ್ಲಿ ಇಂದು ದೂರೊಂದು ದಾಖಲಾಗಿದೆ. ವಿಠಲಗೌಡ ಮಹಜರು ನಡೆಸಿದ ಬಳಿಕ ಎಸ್‌ಐಟಿ ತನಿಖೆ ಬಗ್ಗೆ ವೀಡಿಯೋ ಮಾಡಿ ಹೇಳಿಕೆ ನೀಡಿ ತನಿಖೆಯ ಹಾದಿತಪ್ಪಿಸಲು ಹಾಗೂ ಸಾಕ್ಷ÷್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಧರ್ಮಸ್ಥಳದ ಗ್ರಾಮಸ್ಥ ಸಂದೀಪ್ ರೈ ಎಂಬವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದು, ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್‌ಐಟಿ ತನಿಖೆ ದಾರಿ ತಪ್ಪಿಸೋ ಪ್ರಯತ್ನ ನಡೆದಿದೆ. ಎಸ್‌ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಠಲ್ ಗೌಡ ವೀಡಿಯೋ ಹರಿ ಬಿಟ್ಟು ತನಿಖೆ ಹಾದಿ ತಪ್ಪಿಸಿದ್ದಾನೆ. ವಿಠಲ ಗೌಡ ಹಿಂದೆ ಕೆಲ ವ್ಯಕ್ತಿಗಳು ಸೇರಿಕೊಂಡು ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ವಿಠಲ್ ಗೌಡ ವಿರುದ್ಧ ತನಿಖೆ ನಡೆಸುವಂತೆ ಎಸ್‌ಐಟಿಗೆ ದೂರು ನೀಡಲಾಗಿದೆ. ಎಸ್‌ಐಟಿ ಅಧಿಕಾರಿಗಳು ದೂರು ಸ್ವೀಕರಿಸಿ ಸ್ವೀಕೃತಿ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ
ಈ ನಡುವೆ ಶವ ಹೂತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ನ್ಯಾಯಾಧೀಶರ ಮುಂದೆ ಈ ಹಿಂದೆ ನೀಡಿದ್ದ ಹೇಳಿಕೆಗೆ ಹೆಚ್ಚುವರಿ ಹೇಳಿಕೆ ಸೇರ್ಪಡೆ ಪ್ರಕ್ರಿಯೆಯನ್ನು ಮಾಡಲಾಗಿದೆ. ಕಳೆದ ಸೆ.6ರಂದು ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದ್ದು, ಇಂದು ಅಲ್ಲಿಂದ ಕರೆ ತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ತಿಮರೋಡಿ ವಿರುದ್ಧ ಎಸ್‌ಐಟಿಯಿಂದ ಆರ್ಮ್ಸ್ ಆಕ್ಟ್ ಅಡಿ ಕೇಸ್ ದಾಖಲು