ಯಲ್ಲಾಪುರದಲ್ಲಿ ಲಕ್ಷ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜೊತೆ ಹಣ ವಶ!

Public TV
2 Min Read

ಕಾರವಾರ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬಂಗಾರ, ಬೆಳ್ಳಿ ಆಭರಣ ಹಾಗೂ ದೇಶ ವಿದೇಶದ ಲಕ್ಷಾಂತರ ರುಪಾಯಿ ಹಣವನ್ನು ಜಪ್ತಿ ಮಾಡಿ ನೇಪಾಳ ಮೂಲದ ಐದು ಜನರನ್ನು ಚುನಾವಣಾ ವಿಚಕ್ಷಣ ದಳ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಕಾರವಾರದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕಾರಿನಲ್ಲಿ ತಪಾಸಣೆ ವೇಳೆ ಸಿಂಗಾಪುರ, ಇಂಗ್ಲೆಂಡ್, ನೇಪಾಳದ ಜೊತೆ ಭಾರತದ ಒಟ್ಟು 2.68 ಲಕ್ಷ ರೂ. ನಗದು ಸೇರಿದಂತೆ 2.44 ಕೆಜಿ ಬಂಗಾರದ ಆಭರಣ, 3 ಕೆಜಿ ಬೆಳ್ಳಿಯ ವಸ್ತುಗಳು ಪತ್ತೆಯಾಗಿದೆ.

ನೇಪಾಳ ಮೂಲದ ಸೀತಾರಾಮ್ (31), ವಿಶ್ವನಾಥ (18), ದುಮ್ಮರ(20), ಬಾಲಸಿಂಗ್ (20), ರಾಮ್ (17) ಅವರನ್ನು ವಶಕ್ಕೆ ಪಡೆಯಲಾಗಿದ್ದು, ಎಲ್ಲರೂ ಹುಬ್ಬಳ್ಳಿಯ ನವನಗರದಲ್ಲಿ ವಾಸ್ತವ್ಯ ಮಾಡಿದ್ದರು. ಸಿಕ್ಕಿಬಿದ್ದವರು ಅಂತರಾಷ್ಟ್ರೀಯ ಕಳ್ಳರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸಿಕ್ಕಿ ಬಿದ್ದಿದ್ದು ಹೇಗೆ?
ವಶಕ್ಕೆ ಪಡೆದ ಐವರು ಕಾರವಾರದಿಂದ ಹುಬ್ಬಳ್ಳಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಅಂಕೋಲದ ಬೇಲಿಕೇರಿ ಪೊಲೀಸ್ ಚೆಕ್ ಪೋಸ್ಟ್ ಸಹ ಸಿಗುತ್ತದೆ. ಆದರೆ ಅಲ್ಲಿ ಪೊಲೀಸರು ಚೆಕ್ ಮಾಡದ ಕಾರಣ ಅಲ್ಲಿಂದ ಮುಂದೆ ಸಾಗಿದ್ದಾರೆ. ಎ.ಆರ್.ಓ ರುದ್ರಪ್ಪ ರವರ ನೇತೃತ್ವದಲ್ಲಿನ ತಂಡ ಪ್ರತಿ ವಾಹನವನ್ನು ಬಿಡದೇ ಪರಿಶೀಲನೆ ನಡೆಸಿದ ಪರಿಣಾಮ ಇಂದು ಅಂತರಾಷ್ಟ್ರೀಯ ಕಳ್ಳರನ್ನು ಹಿಡಿಯಲು ಸಾಧ್ಯವಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ತಾಲೂಕು ಅಧಿಕಾರಿ ಶಂಕರ್, ಡಿ.ವೈ.ಎಸ್.ಪಿ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನ ಹೇಳೋದು ಏನು?
ಹಿಂದೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳ ಮೇಲೆ ಕಾರವಾರದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದಾಗ ಮಾಹಿತಿ ಇದ್ದರೂ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಕಾರವಾರದಲ್ಲಿ ಅಬಕಾರಿ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಂಡಾಗ ಅವರ ಮೇಲೆ ದಾಳಿ ನಡೆದಿತ್ತು. ಈ ವಿಚಾರದ ಬಗ್ಗೆ ಮಾಹಿತಿ ನೀಡಿದರೂ ತಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಬಾರದೇ ಕರ್ತವ್ಯ ಲೋಪ ಮಾಡಿದ್ದರು. ಸ್ಥಳೀಯವಾಗಿ ಪೊಲೀಸರೊಂದಿಗೆ ಕೂಡಿ ಜಂಟಿ ಕಾರ್ಯಾಚರಣೆ ನಡೆಸಿದಾಗ ಪೊಲೀಸರ ಮಾಹಿತಿ ಮೇಲೆ ಅಕ್ರಮ ಮದ್ಯ ಸಾಗಾಟಗಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಎಸ್‍ಪಿ ವಿನಾಯಕ್ ಪಾಟೀಲ್ ನೇತೃತ್ವದ ಪೊಲೀಸ್ ಪಡೆ ನಿಷ್ಕ್ರಿಯವಾಗಿದ್ದು ಕಳ್ಳದಂದೆ ಪರವಾಗಿ ನಿಂತಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *