ಮೈಸೂರು: ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸಂತೋಷ್ ಹಾಗೂ ಪಾಪಣ್ಣ ಎಂದು ಗುರುತಿಸಲಾಗಿದೆ. ಬೆಂಕಿಯಲ್ಲಿ ಸಜೀವ ದಹನವಾದ ಉಳಿದವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಈ ಅಪಘಾತ ಕೆ.ಆರ್. ನಗರ ತಾಲೂಕಿನ ಅನಸೋಗೆ ಗ್ರಾಮದ ಗೇಟ್ ಬಳಿ ಸಂಭವಿಸಿದೆ. ಮಧ್ಯರಾತ್ರಿ ಒಂದು ಬೈಕಿನಲ್ಲಿ ಮೂವರು ಹಾಗೂ ಇನ್ನೊಂದು ಬೈಕಿನಲ್ಲಿ ಇಬ್ಬರು ಹೋಗುತ್ತಿದ್ದರು. ಮೂವರು ಹೋಗುತ್ತಿದ್ದ ಬೈಕಿನಲ್ಲಿ ಡೀಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅನಸೋಗೆ ಗ್ರಾಮದ ಗೇಟ್ ಬಳಿ ಎರಡು ಬೈಕ್ ಗಳು ಡಿಕ್ಕಿಯಾಗಿದೆ. ಪರಿಣಾಮ ಡೀಸೆಲ್ ಚೆಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದ್ದರಿಂದ ಬೈಕಿನಲ್ಲಿದ್ದ ಮೂವರು ಸಜೀವ ದಹನವಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ರವಾನಿಸುತ್ತಿರುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಸುತ್ತಲಿನ ಪ್ರದೇಶಕ್ಕೂ ಬೆಂಕಿ ಆವರಿಸಿಕೊಂಡಿದ್ದರಿಂದ ಬೈಕ್ ನಲ್ಲಿದ್ದವರು ಪಾರಾಗಲು ಸಾಧ್ಯವಾಗಿಲ್ಲ. ಇನ್ನು ಘಟನಾ ಸ್ಥಳಕ್ಕೆ ಕೆ.ಆರ್. ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ.
ಈ ಕುರಿತು ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.