ಕಾಲುವೆಗೆ ಬಿದ್ದ ಕಾರ್ – ಅಂತ್ಯಕ್ರಿಯೆ ಮುಗಿಸ್ಕೊಂಡು ಬರ್ತಿದ್ದ ಒಂದೇ ಕುಟುಂಬದ ಐವರ ದುರ್ಮರಣ

Public TV
1 Min Read

ಬೆಳಗಾವಿ: ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಕಾರು ಕಾಲುವೆಗೆ ಬಿದ್ದು ಐದು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪುರ್ ಬಳಿ ನಡೆದಿದೆ.

ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50) ಮತ್ತು ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು. ಸೋಮವಾರ ಸಂಜೆ ಗೋಕಾಕ್ ಪಟ್ಟಣದಲ್ಲಿರುವ ಸಂಬಂಧಿ ಲಕ್ಷ್ಮಣ ಎಂಬವರ ಅಂತ್ಯಸಂಸ್ಕಾರ ಮುಗಿಸಿಕೊಂಡು ಕಡಬಿ ಗ್ರಾಮಕ್ಕೆ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಈ ಅವಘಡ ಸಂಭವಿಸಿದ್ದು, ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾರು ನೀರಿನಲ್ಲಿ ಮುಳುಗಿ ಎಲ್ಲರು ಕಾರ್ ಒಳಗೆ ಮೃತಪಟ್ಟಿದ್ದಾರೆ. ಇನ್ನೂ ಕಾರ್ ಕಾಲುವೆಗೆ ಬೀಳುತ್ತಿದ್ದಂತೆ ಸ್ಥಳೀಯರು ಹೇಗಾದರೂ ಮಾಡಿ ಕಾರಿನಲ್ಲಿದ್ದವರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕಾರ್ ಚಾಲಕ ಅಡಿವೇಪ್ಪ ಮಾಳಗಿ ಎಂಬಾತ ಕಾರು ಕಾಲುವೆಗೆ ಬೀಳುತ್ತಿದ್ದಂತೆ ಈಜಿಕೊಂಡು ಹೊರ ಬಂದಿದ್ದರಿಂದ ಬದುಕುಳಿದಿದ್ದಾನೆ. ಇತ್ತ ಮೃತರೆಲ್ಲರೂ ಕಾರಿನಲ್ಲೇ ಸಾವನ್ನಿಪ್ಪಿದ್ದಾರೆ. ಕತ್ತಲಾಗಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ಕಾರ್ಯಚರಣೆಯನ್ನ ನಿಲ್ಲಿಸಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಿ ಮೃತ ದೇಹಗಳನ್ನ ಹೊರ ತೆಗೆಯಲಿದ್ದಾರೆ.

ಈ ಘಟನೆ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲೇ ಪೊಲೀಸರು ಕೂಡ ಬೀಡು ಬಿಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *