ಛತ್ತೀಸ್‍ಗಢ | ಭದ್ರತಾ ಪಡೆಗಳ ಎನ್‍ಕೌಂಟರ್‌ಗೆ ಐವರು ನಕ್ಸಲರು ಬಲಿ

Public TV
1 Min Read

ರಾಯ್ಪುರ್:‌ ಛತ್ತೀಸ್‌ಗಢದ (Chhattisgarh) ಬಸ್ತಾರ್‌ನ ಕಂಕೇರ್ – ನಾರಾಯಣಪುರ ಗಡಿಯ ಅಬುಜ್‌ಮಧ್‌ನ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳು (Security Force) ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) ಐವರು ನಕ್ಸಲರು ಹತ್ಯೆಗೀಡಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಯೋಧರಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಶನಿವಾರ ಮುಂಜಾನೆ ಐವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ರಾಯ್ಪುರಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಈ ಕಾರ್ಯಾಚರಣೆಯು ರಾಜ್ಯದಾದ್ಯಂತ ನಡೆಯುತ್ತಿರುವ ನಕ್ಸಲ್ ವಿರುದ್ಧದ ಸರಣಿಯ ಭಾಗವಾಗಿದೆ. ಈ ವಾರದ ಆರಂಭದಲ್ಲಿ, ಬಿಜಾಪುರ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 8 ಲಕ್ಷ ರೂ. ಬಹುಮಾನವನ್ನು ಹೊತ್ತಿದ್ದ ನಕ್ಸಲ್ ಕಮಾಂಡರ್ ಸೇರಿದಂತೆ ಮೂವರು ನಕ್ಸಲರ ಹತ್ಯೆಗೈಯ್ಯಲಾಗಿತ್ತು.

ದೀರ್ಘಕಾಲದಿಂದ ನಕ್ಸಲ್ ಪೀಡಿತ ಪ್ರದೇಶವಾದ ಬಸ್ತಾರ್‌ನಲ್ಲಿ ನಕ್ಸಲಿಸಂನ್ನು ಎದುರಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

Share This Article