ಮಂತ್ರಾಲಯಕ್ಕೆ ಹೊರಟಿದ್ದ ವೇಳೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಸಾವು

0 Min Read

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಟೆಕಲ್ ಬಳಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಕೋಲಾರ ಜಿಲ್ಲೆ ಮೂಲದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಹೊರಟಿದ್ದ ಕಾರಿಗೆ ಆದೋನಿ ಕಡೆಗೆ ಹೊರಟಿದ್ದ ಆಂಧ್ರದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 76 ವರ್ಷದ ವೆಂಕಟೇಶಪ್ಪ, 34 ವರ್ಷದ ಸತೀಶ್ ಕುಮಾರ್, ಆತನ ಪತ್ನಿ 26 ವರ್ಷದ ಮೀನಾಕ್ಷಿ, ಇಬ್ಬರು ಮಕ್ಕಳಾರ 6 ವರ್ಷದ ಬಣಿತ್ ಗೌಡ, 4 ವರ್ಷದ ರಿತ್ವಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೂ ಗಂಗಮ್ಮ ಹಾಗೂ ಚಾಲಕ ನವೀನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಇಂದು ಮುಂಜಾನೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ರು, ಸ್ವಿಫ್ಟ್ ಡಿಜೈರ್‌ನಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಫಾರ್ಚೂನರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿ ಸಿಲುಕಿಕೊಂಡ ಮೃತ ದೇಹಗಳನ್ನ ಪೊಲೀಸರು ಹೊರತೆಗೆದಿದ್ದಾರೆ. ಇನ್ನೊಂದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 164 ರಲ್ಲಿ ಭೀಕರ ಅಪಘಾತ ನಡೆದಿದೆ. ಎಮ್ಮಿಗನೂರು -ಆದೋನಿ ಮಧ್ಯದಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಎಮ್ಮಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ರಾತ್ರಿ 9 ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು ಎಂದು ಗಾಯಾಳು ಗಂಗಮ್ಮ ತಂಗಿ ಲಕ್ಷ್ಮಮ್ಮ ತಿಳಿಸಿದ್ದಾರೆ.

Share This Article