ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

Public TV
2 Min Read

ಪಾಟ್ನಾ: ಮಾಟಾ ಮಾಡ್ತಾರೆ ಎಂದು ಆರೋಪಿಸಿ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಕೊಂದುಹಾಕಿರುವ ಆಘಾತಕಾರಿ ಘಟನೆ ಬಿಹಾರದ (Bihar) ಪೂರ್ಣಿಯಾದಲ್ಲಿ (Purnia) ನಡೆದಿದೆ.

ಮೃತರನ್ನು ಬಾಬು ಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸಾಮತ್ ಎಂದು ಗುರುತಿಸಲಾಗಿದೆ. ಗ್ರಾಮಸ್ಥರಿಂದಲೇ ಈ ಕೃತ್ಯ ನಡೆದಿದೆ. ಪುತ್ರನ ಸಮ್ಮುಖದಲ್ಲೇ ಐವರನ್ನು ಹತ್ಯೆ ಮಾಡಲಾಗಿದೆ. ಗ್ರಾಮದ 250ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

ಬಿಹಾರದ ಪೂರ್ಣಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ತೇತ್ಗಾಮಾ ಗ್ರಾಮದಲ್ಲಿ ವಾಮಾಚಾರದ ಆರೋಪದ ಮೇಲೆ ಒಂದೇ ಕುಟುಂಬದ ಐವರನ್ನು ಕ್ರೂರವಾಗಿ ಥಳಿಸಿ, ನಂತರ ಜೀವಂತವಾಗಿ ಸುಟ್ಟುಹಾಕಲಾಗಿದೆ. ಈ ಭೀಕರ ಕೊಲೆ ಸಮುದಾಯದಲ್ಲಿ ಆಘಾತ ಉಂಟುಮಾಡಿದೆ. ಎಲ್ಲಾ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಮದೇವ್ ಒರಾನ್ ಎಂಬವರ ಮಗನ ಸಾವಿನ ಬಳಿಕ ಈ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಗ್ರಾಮದಲ್ಲಿ ‘ಜಾರ್ಫುಕ್’ (ಭೂತೋಚ್ಚಾಟನೆ) ಆಚರಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಒರಾನ್‌ ಅವರ ಪುತ್ರ ಮೃತಪಟ್ಟಿದ್ದಾರೆ. ಅವರ ಇನ್ನೊಬ್ಬ ಮಗ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದ ಎಂದು ಆರೋಪಿಸಲಾಗಿದೆ. ಇಂತಹ ಘಟನೆಗಳಿಗೆ ‘ಮಾಟಗಾತಿಯರು’ ಕಾರಣ ಎಂದು ಆರೋಪಿಸಿ, ಐವರನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಇದನ್ನೂ ಓದಿ: ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ – 82 ಸಾವು, ಬದರೀನಾಥ ಮಾರ್ಗ ಬಂದ್

ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಘಟನೆಯ ನಂತರ, ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅನೇಕ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪೊಲೀಸರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದು, ಎಫ್‌ಎಸ್‌ಎಲ್ (ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ) ತಂಡದೊಂದಿಗೆ ಶ್ವಾನ ದಳ ತನಿಖೆ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಕುಲ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಂತ್ರಸ್ತರನ್ನು ಜೀವಂತವಾಗಿ ಸುಡುವಂತೆ ಗ್ರಾಮಸ್ಥರನ್ನು ಪ್ರಚೋದಿಸಿದ ಆರೋಪ ನಕುಲ್ ಮೇಲಿದೆ.

ಮೃತ ದುರ್ದೈವಿಗಳ ಕುಟುಂಬದ ಬದುಕುಳಿದ ಏಕೈಕ ಸದಸ್ಯ ಲಲಿತ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಕುಟುಂಬದವರು ಮಾಟ ಮಾಡ್ತಾರೆ ಎಂದು ಆರೋಪಿಸಿ ಗ್ರಾಮಸ್ಥರು ಥಳಿಸಿದರು. ನಂತರ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಹೇಗೋ ನಾನು ನನ್ನ ಪ್ರಾಣ ಉಳಿಸಿಕೊಂಡೆ. ಸುಟ್ಟ ಶವಗಳನ್ನು ನೀರಿಗೆ ಎಸೆದಿದ್ದಾರೆಂದು ಭೀಕರ ಸನ್ನಿವೇಶವನ್ನು ವಿವರಿಸಿದ್ದಾರೆ.

Share This Article