ಮೂರಂತಸ್ತಿನ ಕಟ್ಟಡ ಕುಸಿತ- ನಾಲ್ವರು ಮಕ್ಕಳು ಸೇರಿದಂತೆ ಐವರು ಸಾವು!

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿಯ ಉತ್ತರ ದೆಹಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಓರ್ವ ಮಹಿಳೆ ಸಾವನಪ್ಪಿ ಹಲವಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.

ಸವಾನ್ ಪಾರ್ಕ್ ಸಮೀಪದ ಮೂರಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಮಕ್ಕಳು ಸೇರಿದಂತೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಕಟ್ಟಡ ಕುಸಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಇಲ್ಲಿಯವರೆಗು ಒಟ್ಟು 8 ಮಂದಿಯನ್ನು ಅವಶೇಷಗಳ ಅಡಿಯಿಂದ ಹೊರಕ್ಕೆ ತೆಗೆಯಲಾಗಿದೆ. ಇದರಲ್ಲಿನ ಒಟ್ಟು ಮೂರು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಟ್ಟಡದಲ್ಲಿ ಬಹುತೇಕ ಬಾಡಿಗೆದಾರರು ವಾಸವಾಗಿದ್ದು, ಕಟ್ಟಡವು ಶಿಥಿಲಾವಸ್ಥೆ ತಲುಪಿತ್ತು. ಅಲ್ಲದೇ ಇತ್ತೀಚೆಗಷ್ಟೆ ಬಿರುಕು ಕಾಣಿಸಿಕೊಂಡಿತ್ತು. ಕಳೆದ ಒಂದು ವರ್ಷದ ಹಿಂದೆಯೇ ದೆಹಲಿ ಮಹಾನಗರ ಪಾಲಿಕೆಯು ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿತ್ತು ಎಂದು ಪ್ರತ್ಯಕ್ಷದರ್ಶಿ ಹಾಗೂ ಬಾಡಿಗೆದಾರರಾದ ಸುನಿಲ್ ಕುಮಾರ್ ಗುಪ್ತರವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಅಧಿಕಾರಿಗಳು, ಕಟ್ಟಡ ಶಿಥಿಲಾವಸ್ಥೆಯ ಬಗ್ಗೆ ಈಗಾಗಲೇ ನೋಟಿಸ್ ನೀಡಿತ್ತು. ಆದರೂ ಕಟ್ಟಡ ಮಾಲೀಕರು ಬೇಜವಾಬ್ದಾರಿ ಪ್ರದರ್ಶಿಸಿ, ಅವಘಡಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *